ಕ್ಲಬ್‌ ಹೌಸ್ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲ ಹೇಳಿಕೆ: ಮೂವರ ಬಂಧನ

Update: 2022-01-21 05:58 GMT

ಮುಂಬೈ: ಕ್ಲಬ್‌ ಹೌಸ್ ಆ್ಯಪ್‌ ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಹರ್ಯಾಣದ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಮುಂಬೈ ಅಪರಾಧ ವಿಭಾಗದ ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಗುರುವಾರ ತಡರಾತ್ರಿ ಮೂವರನ್ನು  ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ಇಬ್ಬರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದು ಮುಂಜಾನೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ನಗರ ಪೊಲೀಸರನ್ನು ಶ್ಲಾಘಿಸಿದ್ದಾರೆ.

ಬುಧವಾರ, ದಿಲ್ಲಿ ಪೊಲೀಸರು ಕ್ಲಬ್‌ ಹೌಸ್ ಅಪ್ಲಿಕೇಶನ್ ಮತ್ತು ಸರ್ಚ್ ಇಂಜಿನ್ ಗೂಗಲ್‌ಗೆ ಪತ್ರ ಬರೆದಿದ್ದಾರೆ.  "ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲ ಕಮೆಂಟ್‌ಗಳನ್ನು ಮಾಡಲಾಗಿದೆ" ಎಂಬ ಆಪಾದಿತ ಆಡಿಯೊ ಗ್ರೂಪ್ ಚಾಟ್‌ನ ಆಯೋಜಕರ ಕುರಿತು ವಿವರಗಳನ್ನು ಕೋರಿದ್ದಾರೆ. ತನಿಖೆಯ ಭಾಗವಾಗಿ ಎರಡೂ ಸಮುದಾಯಗಳ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಗ್ರೂಪ್ ಆಡಿಯೊ ಚಾಟ್‌ನ ಕೆಲವು ಸದಸ್ಯರನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಬೈ ಮೂಲದ ಸಂಸ್ಥೆಯು ಕ್ಲಬ್‌ ಹೌಸ್ ಆ್ಯಪ್‌ ಗೆ ಸಂಬಂಧಿಸಿದಂತೆ ಬುಧವಾರ ನಗರ ಪೊಲೀಸರಿಗೆ ದೂರು ನೀಡಿದ್ದು, ಆ್ಯಪ್ ನಿಷ್ಕ್ರಿಯಗೊಳಿಸುವಂತೆ ಹಾಗೂ  ಪ್ರಕರಣವನ್ನು ದಾಖಲಿಸುವಂತೆ ಕೋರಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News