ಶಿಫ್ಟ್ ಅವಧಿ ಮುಗಿದಿದೆ ಎಂದು ವಿಮಾನ ಹಾರಾಟ ಮುಂದುವರಿಸಲು ನಿರಾಕರಿಸಿದ ಪೈಲಟ್!

Update: 2022-01-21 12:52 GMT
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ತನ್ನ ಶಿಫ್ಟ್ ಅವಧಿ ಮುಗಿದಿದೆ ಎಂದು ಹೇಳಿಕೊಂಡು ವಿಮಾನ ಹಾರಾಟ ಮುಂದುವರಿಸಲು ಪಾಕಿಸ್ತಾನ್ ಇಂಟರ್‍ನ್ಯಾಷನಲ್ ಏರ್‍ಲೈನ್ಸ್‍ನ ಪೈಲಟ್ ಒಬ್ಬ ನಿರಾಕರಿಸಿದ ಘಟನೆ ನಡೆದಿದೆ.

ವಿಮಾನ ಪಿಕೆ-9754 ರಿಯಾದ್ ನಿಂದ ಹೊರಟು  ಇಸ್ಲಾಮಾಬಾದ್ ತಲುಪಬೇಕಿತ್ತು. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ  ವಿಮಾನ ಸೌದಿ ಅರೇಬಿಯಾದ ದಮಾಮ್‍ನಲ್ಲಿ ಇಳಿದಿತ್ತು. ನಂತರ ವಿಮಾನ ಹಾರಾಟ ಮಾಡಲು ನಿರಾಕರಿಸಿದ ಪೈಲಟ್ ತನ್ನ ಶಿಫ್ಟ್ ಆವಧಿ ಮುಗಿದಿದೆ ಎಂದು ಹೇಳಿದ್ದ. ಇದು ಸಾಲದೆಂಬಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿಯಲು ನಿರಾಕರಿಸಿ ವಿಮಾನ ಹಾರಾಟದಲ್ಲಾಗುತ್ತಿರುವ ವಿಳಂಬವನ್ನು ಪ್ರತಿಭಟಿಸಿದ್ದರು.ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಅಲ್ಲಿಗೆ ಧಾವಿಸಿದ್ದರು ಎಂದು ವರದಿಯಾಗಿದೆ.

"ವಿಮಾನ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪೈಲಟ್‍ಗೆ ವಿರಾಮ ಬೇಕಿದೆ. ಎಲ್ಲಾ ಪ್ರಯಾಣಿಕರು ಇಸ್ಲಾಮಾಬಾದ್ ವಿಮಾನ ನಿಲ್ದಾಣವನ್ನು ರಾತ್ರಿ 11 ಗಂಟೆಗೆ ತಲುಪುತ್ತಾರೆ. ಅಲ್ಲಿಯ ತನಕ ಅವರಿಗೆ ಹೋಟೆಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ,'' ಎಂದು ಏರ್‍ಲೈನ್ಸ್ ವಕ್ತಾರರು ನಂತರ ಪ್ರಯಾಣಿಕರನ್ನು ಸಮಾಧಾನ ಪಡಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News