ಪಂಜಾಬ್ ವಿಧಾನಸಭಾ ಚುನಾವಣೆ: ಸ್ಥಾನ ಹಂಚಿಕೆ ಪೂರ್ಣ; 65ರಲ್ಲಿ ಬಿಜೆಪಿ, 37ರಲ್ಲಿ ಅಮರಿಂದರ್ ಪಕ್ಷದ ಸ್ಪರ್ಧೆ
ಚಂಡಿಗಡ,ಜ.24: ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಎನ್‌ಡಿಎ ಮೈತ್ರಿಕೂಟದ ಸ್ಥಾನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು,ಬಿಜೆಪಿ 65,ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನೂತನ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ 37 ಮತ್ತು ಶಿರೋಮಣಿ ಅಕಾಲಿ ದಳ (ಸಂಯುಕ್ತ) 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಸಿಂಗ್ ಅವರು ರವಿವಾರ ತನ್ನ ಪಕ್ಷದ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದರು.
ಸಿಂಗ್ ತನ್ನ ತವರು ಕ್ಷೇತ್ರ ಪಟಿಯಾಳಾ (ನಗರ)ದಿಂದ ಕಣಕ್ಕಿಳಿಯಲಿದ್ದಾರೆ. ಅವರ ಪಕ್ಷಕ್ಕೆ ದಕ್ಕಿರುವ 37 ಸ್ಥಾನಗಳ ಪೈಕಿ 26 ಮಾಲ್ವಾ ಪ್ರದೇಶದಲ್ಲಿವೆ. ಅಂದಿನ ಪಟಿಯಾಳಾ ಸಂಸ್ಥಾನದ ಭಾಗವಾಗಿದ್ದ ಈ ಪ್ರದೇಶದೊಂದಿಗೆ ಸಿಂಗ್ ಉತ್ತಮ ಕುಟುಂಬ ಸಂಬಂಧಗಳನ್ನು ಹೊಂದಿದ್ದಾರೆ.
ತನ್ನ ಕೃಷಿ ಸುಧಾರಣೆಗಳಿಂದ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮೇಲುಗೈ ದೊರಕಿಸುವಲ್ಲಿ ಸಿಂಗ್ ಅವರಿಗೆ ಮಾಲ್ವಾ ಪ್ರದೇಶವು ನೆರವಾಗಿತ್ತು. ಈ ಸಲ ಕೇಂದ್ರ ಸರಕಾರವು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಿರುವುದು ಸಿಂಗ್ ಅವರಿಗೆ ಪೂರಕವಾಗಲಿದೆ ಎಂದು ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.