ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧದ 30ನೇ ವರ್ಷಾಚರಣೆ: ಇಸ್ರೇಲ್ ಪ್ರಧಾನಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ

Update: 2022-01-24 17:11 GMT
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್(photo:twitter/@naftalibennett)

ಜೆರುಸಲೇಂ, ಜ.24: ಭಾರತ-ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ 30 ವರ್ಷದ ಮೈಲುಗಲ್ಲನ್ನು ತಲುಪಿರುವಂತೆಯೇ, ಇಸ್ರೇಲ್ ಪ್ರಧಾನಿ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಭಾರತಕ್ಕೆ ಇಸ್ರೇಲ್ ರಾಯಭಾರಿ ನವೋರ್ ಗಿಲೋನ್ ಸೋಮವಾರ ಹೇಳಿದ್ದಾರೆ.

ಉಭಯ ದೇಶಗಳ ಸ್ನೇಹ ಸಂಬಂಧದ 30ನೇ ವರ್ಷಾಚರಣೆ ವರ್ಷವಿಡೀ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವಿಶೇಷ ಲೋಗೊವನ್ನು ವರ್ಚುವಲ್ ವೇದಿಕೆಯ ಮೂಲಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರಾಚೀನ ನಾಗರಿಕತೆಯ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯ ಅಸಾಧಾರಣವಾಗಿದ್ದು ಭಾರತಕ್ಕೆ ಇಸ್ರೇಲ್‌ನ ರಾಯಭಾರಿಯಾಗುವ ಅವಕಾಶ ಸಿಕ್ಕಿದ್ದು ತನ್ನ ಅದೃಷ್ಟವಾಗಿದೆ ಎಂದವರು ಹೇಳಿದರು.

ನಮ್ಮ ಪರಸ್ಪರ ಯಶಸ್ಸನ್ನು ಪ್ರತಿಬಿಂಬಿಸಲು ಮತ್ತು ಮುಂದಿನ 30 ವರ್ಷಾವಧಿಗೆ ನಮ್ಮ ಸಂಬಂಧವನ್ನು ರೂಪಿಸುವಲ್ಲಿ ಇದೊಂದು ಪ್ರಮುಖ ಸಂದರ್ಭವಾಗಿದೆ. ವಿವಿಧ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ನಿಕಟ ಸಹಕಾರ ಸಂಬಂಧ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಎಂಬ ವಿಶ್ವಾಸವಿದೆ. ಯುರೋಪ್ ಹಾಗೂ ಇನ್ನಿತರ ದೇಶಗಳಲ್ಲಿ ಕಂಡುಬರುವ ಯೆಹೂದಿ ವಿರೋಧಿ ಧೋರಣೆ ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ಇರಲಿಲ್ಲ ಎಂದು ಗಿಲೋನ್ ಹೇಳಿದರು.

ಬಳಿಕ, ಇಸ್ರೇಲ್‌ಗೆ ಭಾರತದ ರಾಯಭಾರಿ ಸಂಜೀವ್ ಸಿಂಗ್ಲಾರೊಂದಿಗೆ ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮದ ಲೋಗೋವನ್ನು ಅನಾವರಣಗೊಳಿಸಿದರು. ಸ್ಟಾರ್ ಆಫ್ ಡೇವಿಡ್ ಮತ್ತು ಅಶೋಕ ಚಕ್ರ(ಉಭಯ ದೇಶಗಳ ರಾಷ್ಟ್ರಧ್ವಜದಲ್ಲಿರುವ ಎರಡು ಚಿಹ್ನೆಗಳು)ದ ಜತೆಗೆ 30 ಎಂಬ ಸಂಖ್ಯೆಯನ್ನು ಹೊಂದಿದ ಲೋಗೊ ಇದಾಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಸ್ರೇಲ್‌ನ ಪ್ರಥಮ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಮಾತನಾಡಿ, ಭಾರತ-ಇಸ್ರೇಲ್‌ನ ಸ್ವಾತಂತ್ರ್ಯ ಹೋರಾಟವು ಸಹೋದರಿಯರ ವಿಮೋಚನಾ ಆಂದೋಲನವಾಗಿತ್ತು . ಮಹಾತ್ಮಾ ಗಾಂಧೀಜಿಯವರ ಬಗ್ಗೆ ತನಗೆ ಹೆಚ್ಚಿನ ಗೌರವವಿತ್ತು ಮತ್ತು ಈಗಲೂ ಅವರ ಅವರ ಫೋಟೋ ಮನೆಯಲ್ಲಿದೆ ಎಂದರು.

ಸಂಜೀವ್ ಸಿಂಗ್ಲಾ ಮಾತನಾಡಿ, ಪ್ರಧಾನಿ ಮೋದಿ 2017ರಲ್ಲಿ ಇಸ್ರೇಲ್‌ಗೆ ನೀಡಿದ ಐತಿಹಾಸಿಕ ಭೇಟಿಯ ಸಂದರ್ಭ ಸಹಿ ಹಾಕಲಾದ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಗೆ 5 ವರ್ಷ ತುಂಬಿದೆ. ಆದ್ದರಿಂದ ರಾಜತಾಂತ್ರಿಕ ಸಂಬಂಧದ 30ನೇ ವರ್ಷಾಚರಣೆಯ ಜತೆಗೆ, ಕಾರ್ಯತಂತ್ರದ ಪಾಲುದಾರಿಕೆಯ 5 ವರ್ಷದ ಸಂಭ್ರಮಾಚರಣೆಯ ಸಮಯವೂ ಕೂಡಿಬಂದಿದೆ. ಈ ಮೈಲುಗಲ್ಲನ್ನು ತಲುಪಿದ ಸಂಭ್ರಮಾಚರಣೆ ಸಂದರ್ಭ ನಮ್ಮ ಮುಖಂಡರು, ರಾಜತಾಂತ್ರಿಕರು, ಚಿಂತಕರು ಮತ್ತು ಪಾಲುದಾರಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸಿದ ಎಲ್ಲಾ ಜನರ ಪ್ರಯತ್ನವನ್ನೂ ಶ್ಲಾಘಿಸಬೇಕಿದೆ. ಎರಡೂ ದೇಶಗಳ ಜನತೆಯನ್ನು ನಾಗರಿಕತೆಯ ಬಂಧ ಪರಸ್ಪರ ಸಂಪರ್ಕಿಸಿದೆ ಮತ್ತು ಇದು ವ್ಯಾಪಾರ ಮತ್ತು ಆರ್ಥಿಕ ಸಂಬಂಧಕ್ಕಿಂತಲೂ ಮಿಗಿಲಾಗಿದೆ. ಭಾರತದ ಸಂಯೋಜಿತ ಸಂಸ್ಕೃತಿಯನ್ನು ಯೆಹೂದಿ ಜನತೆ ಶ್ರೀಮಂತಗೊಳಿಸಿದ್ದಾರೆ ಎಂದರು. ಇದೇ ಸಂದರ್ಭ ಯೆಹೂದಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯೆಹೂದಿ ಜನತೆ ಉಭಯ ದೇಶಗಳ ನಡುವೆ ಪರಂಪರೆ, ಸಾಂಸ್ಕೃತಿಕ ಆಚರಣೆ, ಪರಸ್ಪರ ವಿಶ್ವಾಸ ಮತ್ತು ಸ್ನೇಹತ್ವವನ್ನು ಮುಂದುವರಿಸುವ ಸೇತುವೆಯಾಗಿದ್ದಾರೆ ಎಂದರು.

ಕಳೆದ ವರ್ಷ ಇಸ್ರೇಲ್‌ಗೆ ಭೇಟಿ ನೀಡಿದ್ದ ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್, ಭಾರತಕ್ಕೆ ಭೇಟಿ ನೀಡುವಂತೆ ಇಸ್ರೇಲ್ ಪ್ರಧಾನಿಗೆ ಭಾರತದ ಪ್ರಧಾನಿ ನೀಡಿದ್ದ ಆಹ್ವಾನವನ್ನು ತಲುಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News