ಜ. 26: ಹೆಜಮಾಡಿಯಲ್ಲಿ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್

Update: 2022-01-24 17:15 GMT

ಪಡುಬಿದ್ರಿ: ತಾಲ್ಲೂಕು ಪಂಚಾಯಿತಿ ಸದಸ್ಯೆಯಾಗಿದ್ದ ದಿ.ರೇಣುಕಾ ಪುತ್ರನ್ ಸವಿನೆನಪಿಗಾಗಿ ಜ.26ರಂದು ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾಟ "ನೆನಪು-2022" ಆಯೋಜಿಸಲಾಗಿದೆ.

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಆಶ್ರಯ ದಲ್ಲಿ ಮಾಜಿ ಸಚಿವ ವಿನಯ ಕುಮಾರ್ ನೇತೃತ್ವದಲ್ಲಿ ಪಂದ್ಯಾಟವು ನಡೆಯಲಿದೆ. ಸೋಮವಾರ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಸುಧೀರ್ ಎಸ್.ಕರ್ಕೇರ ಈ ಬಗ್ಗೆ ಮಾಹಿತಿ ನೀಡಿದರು.

ಪಂದ್ಯಾಟದಲ್ಲಿ ರಾಜ್ಯಮಟ್ಟದ 10 ತಂಡಗಳು ಭಾಗವಹಿಸಲಿದ್ದು, ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ವಿನಯಕುಮಾರ್ ಸೊರಕೆಯವರು ಪಂದ್ಯಾಟ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭವು ಸಂಜೆ 6 ಗಂಟೆಗೆ ನಡೆಯಲಿದ್ದು, ಉಭಯ ಕಾರ್ಯಕ್ರಮಗಳಲ್ಲಿ ಉಭಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಚಲನಚಿತ್ರ ನಟ ನಟಿಯರು ಭಾಗವಹಿಸಲಿದ್ದಾರೆ.

ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಪ್ರಶಸ್ತಿ ಸಹಿತ ನಗದು ರೂ.33,333, ದ್ವಿತೀಯ ನಗದು ರೂ.22,222 ಹಾಗೂ ವೈಯಕ್ತಿಕ ಪ್ರಶಸ್ತಿಗಳಿವೆ. ಸಮಾರೋಪ ಸಮಾರಂಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಸನ್ಮಾನ, ನೃತ್ಯ ವೈವಿಧ್ಯ ಸಹಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೂರು ಭಾರಿ ಮುಂದೂಡಿಕೆ: ನೆನಪು ಕಾರ್ಯಕ್ರಮವನ್ನು ಈ ಹಿಂದೆ ಕೋವಿಡ್ ಮತ್ತು ಚುನಾವಣೆ ಹಿನ್ನೆಲೆಯಲ್ಲಿ 3 ಬಾರಿ ಮುಂದೂಡಲಾಗಿತ್ತು. ಈ ಮೊದಲು ಕಳೆದ ವರ್ಷ ಎಪ್ರಿಲ್ 25-26, ಮತ್ತು ಡಿಸೆಂಬರ್ 25-26ರಂದು ಮತ್ತು ಈ ವರ್ಷ ಜನವರಿ 9 ರಂದು ಆಯೋಜಿಸಿ ಮುಂದೂಡಲಾಗಿದ್ದು, ಇದೀಗ ಜನವರಿ 26ಕ್ಕೆ ನಿಗದಿಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಅಬ್ದುಲ್ ಅಝೀಝ್, ರಮೀಝ್ ಹುಸೈನ್, ಕೇಶವ ಸಾಲ್ಯಾನ್, ಸನಾ ಇಬ್ರಾಹಿಮ್, ಸುಭಾಷ್ ಜಿ.ಸಾಲ್ಯಾನ್, ಜಯಶ್ರೀ, ಹಸನ್, ಕುಸುಮ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News