ರಾಷ್ಟ್ರೀಯ ಭದ್ರತೆ ಹೆಸರಲ್ಲಿ ಆರೋಪಿಗಳನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್

Update: 2022-01-25 02:00 GMT

ಹೊಸದಿಲ್ಲಿ: ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಆರೋಪಿಗಳನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.

ವ್ಯಕ್ತಿಯೊಬ್ಬನ ಚಟುವಟಿಕೆಗಳು ದೊಡ್ಡ ಪಿತೂರಿಯನ್ನು ಒಳಗೊಂಡಿವೆ ಎಂಬ ಅನುಮಾನದಿಂದ ತನಿಖಾ ಏಜೆನ್ಸಿಗಳ ಮುಕ್ತ ತನಿಖೆಗೆ ಅನುಸಾರವಾಗಿ ಆರೋಪಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿ ಇಡಲಾಗದು ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ದಿನೇಶ್ ಮಾಹೇಶ್ವರಿ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದ್ದು, ಗಡಿ ಪ್ರದೇಶದಲ್ಲಿ ಜಾನುವಾರು ಕಳ್ಳತನ ಪ್ರಕರಣದ ಆರೋಪಿ ಮೊಹ್ಮದ್ ಅನಾಮುಲ್ ಹಕ್‌ಗೆ ಜಾಮೀನು ಮಂಜೂರು ಮಾಡಿತು. ಈ ಪ್ರಕರಣದಲ್ಲಿ ತನಿಖಾ ಏಜೆನ್ಸಿ ಬಿಎಸ್‌ಎಫ್ ಕಮಾಂಡೆಂಟ್ ಅವರನ್ನು ಬಂಧಿಸಿದ್ದು, ಈ ಕಳ್ಳಸಾಗಾಣಿಕೆಯಿಂದ ಬಂದ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ನೀಡಲಾಗುತ್ತಿದೆ ಎಂದು ಆಪಾದಿಸಿತ್ತು.

ಹಕ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ, "ಸಿಬಿಐ 2021ರ ಫೆಬ್ರುವರಿ 6ರಂದು ಜಾನುವಾರು ಕಳ್ಳಸಾಗಾಣಿಕೆ ಪ್ರಕರಣ ಸಂಬಂಧ ಆರೋಪಪಟ್ಟಿ ಸಲ್ಲಿಸಿತ್ತು. ಬಳಿಕ ಫೆಬ್ರುವರಿ 21ರಂದು ಪೂರಕ ಆರೋಪಪಟ್ಟಿ ಸಲ್ಲಿಸಿತು. ಆರೋಪಿ ಬಿಎಸ್‌ಎಫ್ ಕಮಾಂಡೆಂಟ್ ಮತ್ತು ಇತರ ಆರೋಪಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ಜಾಮೀನು ನೀಡಿದೆ, ಆದರೆ ಆರೋಪಿ ಹಕ್ ಒಂದು ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲಿದ್ದರೂ, ಜಾಮೀನು ನಿರಾಕರಿಸಿದೆ" ಎಂದು ವಾದಿಸಿದರು. ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಹಾಜರಾಗಿದ್ದರು.

ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಸಿಬಿಐ ಪರ ವಕೀಲರು ವಾದಿಸಿದಾಗ ಆಕ್ಷೇಪಿಸಿದ ನ್ಯಾಯಮೂರ್ತಿಗಳು, ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವಾಗ ಮುಖ್ಯ ಆರೋಪಿಯನ್ನು ಅನಿರ್ದಿಷ್ಟಾವಧಿ ಕಾಲ ಜೈಲಿನಲ್ಲಿಡುವುದು ತನಿಖೆಗೆ ಹೇಗೆ ನೆರವಾಗುತ್ತದೆ ಎಂದು ಪ್ರಶ್ನಿಸಿದರು. ಆತ ಒಂದು ವರ್ಷ ಎರಡು ತಿಂಗಳು ಜೈಲಿನಲ್ಲಿದ್ದು, ತನಿಖೆ ನಡೆಸಲು ಇಷ್ಟು ಸಮಯ ಸಾಕಾಗುವುದಿಲ್ಲವೇ ಎಂದು ಕೇಳಿದರು. ಹಕ್‌ಗೆ ಜಾಮೀನು ಮಂಜೂರು ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News