"ಗೋರಖ್‌ಪುರದಲ್ಲಿ ಆದಿತ್ಯನಾಥ್‌ ವಿರುದ್ಧ ಸ್ಫರ್ಧಿಸಲು ನಾನು ಸಿದ್ಧನಿದ್ದೇನೆ" ಎಂದ ಡಾ. ಕಫೀಲ್‌ ಖಾನ್‌

Update: 2022-01-25 09:25 GMT

ಲಕ್ನೋ: 2017 ರ ಬಿಆರ್‌ಡಿ ವೈದ್ಯಕೀಯ ಕಾಲೇಜು ದುರಂತದಲ್ಲಿ ಆಮ್ಲಜನಕದ ಕೊರತೆಯಿಂದ ಹಲವಾರು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ವಜಾ ಮಾಡಲಾಗಿದ್ದ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್, ಯಾವುದೇ ಪಕ್ಷವು ತನಗೆ ಬೆಂಬಲ ನೀಡಿದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್‌ಪುರದಿಂದ ಸ್ಪರ್ಧಿಸಬಹುದು ಎಂದು ಮಂಗಳವಾರ ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ 9 ರಂದು ಡಾ. ಕಫೀಲ್ ಖಾನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು ಮತ್ತು ಅವರು ೀ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

“ನಾನು ಆದಿತ್ಯನಾಥ್ ವಿರುದ್ಧ ಗೋರಖ್‌ಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಯಾವುದೇ ಪಕ್ಷ ನನಗೆ ಟಿಕೆಟ್ ನೀಡಿದರೆ ನಾನು ಚುನಾವಣೆಗೆ ಸಿದ್ಧ ಎಂದು ಖಾನ್ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದರು.

ಯಾವುದೇ ಪಕ್ಷದೊಂದಿಗೆ ಅವರು ಸಂಪರ್ಕದಲ್ಲಿದ್ದಾರೆಯೇ ಅಥವಾ ಯಾರನ್ನಾದರೂ ಸಂಪರ್ಕಿಸಿದ್ದೀರಾ? ಎಂದು ಕೇಳಿದಾಗ, “ಹೌದು, ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ" ಎಂದು ಅವರು ಹೇಳಿದರು. ಗೋರಖ್‌ಪುರದಲ್ಲಿ ಮಾರ್ಚ್ 3 ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ.

ಆಗಸ್ಟ್ 2017 ರಲ್ಲಿ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 80 ಕುಟುಂಬಗಳ ಮಕ್ಕಳು ಸಾವನ್ನಪ್ಪಿದ ದುರಂತದಲ್ಲಿ ಅವರನ್ನು ಬಲಿಪಶು ಮಾಡಲಾಯಿತು ಎಂದು ಖಾನ್ ಹೇಳಿದರು.

"ನಾನು ಫೇಸ್‌ಬುಕ್, ಟ್ವಿಟರ್, ಇತ್ಯಾದಿಗಳಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯವಾಗಿದ್ದೇನೆ ಮತ್ತು ಅಲ್ಲಿ ನಾನು ಈ ಕುರಿತು ಹೇಳಿಕೆ ನೀಡುತ್ತೇನೆ. ಸದ್ಯ ನಾನು ಮುಂಬೈನಲ್ಲಿದ್ದೇನೆ. ಇಲ್ಲಿಂದ ನಾನು ಹೈದರಾಬಾದ್ ಮತ್ತು ಬೆಂಗಳೂರಿಗೆ ನನ್ನ ಪುಸ್ತಕದ ಪ್ರಚಾರಕ್ಕಾಗಿ ಹೋಗುತ್ತೇನೆ. 'ಗೋರಖ್‌ಪುರ ಹಾಸ್ಪಿಟಲ್ ಟ್ರಾಜಿಡಿ- ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ ಡೆಡ್ಲಿ ಮೆಡಿಕಲ್ ಕ್ರೈಸಿಸ್' (The Gorakhpur Hospital Tragedy- A Doctor’s Memoir of a Deadly Medical Crisis’), ಇದು 5000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುವ ಮೂಲಕ ಬೆಸ್ಟ್ ಸೆಲ್ಲರ್ ಆಗಿದೆ, ”ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News