ವಿದೇಶಿ ದೇಣಿಗೆ ಕಾಯ್ದೆಯಡಿ ಪರವಾನಗಿ ನವೀಕರಣ ಕೋರಿ ಸಲ್ಲಿಸಿದ್ದ ಅರ್ಜಿಯ ಬೇಡಿಕೆ ಪರಿಗಣಿಸಲು ನಿರಾಕರಿಸಿದ ಸುಪ್ರೀಂ

Update: 2022-01-25 11:56 GMT

ಹೊಸದಿಲ್ಲಿ: ವಿದೇಶಿ ದೇಣಿಗೆ ಪಡೆಯಲು ಸುಮಾರು 6,000 ಎನ್‍ಜಿಒಗಳಿಗೆ ಅಗತ್ಯವಿರುವ ಪರವಾನಗಿಯನ್ನು ನವೀಕರಿಸಲು ಕೇಂದ್ರ ಸರಕಾರ ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಬೇಡಿಕೆಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಅಮೆರಿಕಾ ಮೂಲದ ಗ್ಲೋಬಲ್ ಪೀಸ್ ಇನೀಶಿಯೇಟಿವ್ ಎನ್‍ಜಿಓ ಈ ಅಪೀಲನ್ನು ಸಲ್ಲಿಸಿದ್ದು ಪರವಾನಗಿಗಳನ್ನು ರದ್ದುಗೊಳಿಸಿದರೆ ಸಂಘಟನೆಗಳು ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆ ನಡೆಸುತ್ತಿರುವ ಪರಿಹಾರ ಕಾರ್ಯಗಳನ್ನು ಬಾಧಿಸಲಿದೆ ಹಾಗೂ ಅಗತ್ಯವುಳ್ಳ ಜನರನ್ನು ಸಹಾಯದಿಂದ ವಂಚಿತವಾಗಿಸಬಹುದು ಎಂದು ಹೇಳಿತ್ತು.

ಪರವಾನಗಿ ನವೀಕರಣಕ್ಕೆ  ಅಂತಿಮ ದಿನಾಂಕದ ಮೊದಲು ಅರ್ಜಿ ಸಲ್ಲಿಸಿದ್ದ 11,594 ಎನ್‍ಜಿಒಗಳ ಪರವಾನಗಿ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಲ್ಲಿಸಿದ ಅಫಿಡವಿಟ್ ಅನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರ ಪೀಠ ಗಣನೆಗೆ ತೆಗೆದುಕೊಂಡಿತಲ್ಲದೆ  ಸಂಬಂಧಿತ ಎನ್‍ಜಿಒಗಳು ತಮ್ಮ ಮನವಿಯನ್ನು ಸೂಕ್ತ ಪ್ರಾಧಿಕಾರಗಳ ಮುಂದಿಡಬಹುದು ಎಂದು ಹೇಳಿದೆ.

ಈ ನಿರ್ದಿಷ್ಟ ಅರ್ಜಿ ಸಲ್ಲಿಸಿದ್ದ ಎನ್‍ಜಿಒ ಅಮೆರಿಕಾ ಮೂಲದ್ದಾಗಿದೆ, ಈಗಾಗಲೇ ಅರ್ಜಿ ಸಲ್ಲಿಸಿದ ಸಂಸ್ಥೆಗಳ ಪರವಾನಗಿ ವಿಸ್ತರಿಸಲಾಗಿದೆ, ಈ ನಿರ್ದಿಷ್ಟ ಅರ್ಜಿಯ ಉದ್ದೇಶವೇನು ಎಂದು ತಿಳಿದಿಲ್ಲ ಎಂದು ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಈ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕ ನಿಗದಿಯಾಗಿಲ್ಲ ಆದರೆ ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದ ತೀರ್ಪು ಬಂದ ನಂತರ  ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಮಿಷನರೀಸ್ ಆಫ್ ಚ್ಯಾರಿಟಿಯ ಉಲ್ಲೇಖವೂ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News