"ನಾವು ನೋಡುವಾಗ ಆತ ನೋವಿನಲ್ಲಿ ನರಳುತ್ತಿದ್ದ": ʼಪೊಲೀಸ್‌ ದೌರ್ಜನ್ಯʼದಿಂದ ಸಾವನ್ನಪ್ಪಿದ ಬಾಲಕನ ಕುಟುಂಬ

Update: 2022-01-25 12:04 GMT
Photo: Video screengrab

ಲಖೀಂಪುರ್ ಖೇರಿ: "ತಾನು ಮೊಬೈಲ್ ಫೋನ್ ಕದ್ದಿಲ್ಲ ಎಂದು ನನ್ನ ಸಹೋದರ ಅವರ ಮುಂದೆ ಪರಿಪರಿಯಾಗಿ ರೋದಿಸಿ ಹೇಳಿಕೊಂಡರೂ ಪೊಲೀಸರು ಆತನಿಗೆ ಪ್ರಾಣಿಗೆ ಹೊಡೆದಂತೆ ಹೊಡೆದಿದ್ದರು" ಎಂದು ಇತ್ತೀಚೆಗೆ ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟ ಥಾರು ಆದಿವಾಸಿ ಜನಾಂಗದ 16 ವರ್ಷದ ಬಾಲಕನ ಸೋದರಿ ಪೂಜಾ ದುಃಖದಿಂದ ಹೇಳುತ್ತಾಳೆ ಎಂದು thewire.in ವರದಿಯಲ್ಲಿ ಉಲ್ಲೇಖಿಸಿದೆ.

ಘಟನೆ ಉತ್ತರ ಪ್ರದೇಶದ ಖೇರಿ ಜಿಲ್ಲೆಯ ಕಮಲಾಪುರಿ ಗ್ರಾಮದಲ್ಲಿ ಘಟನೆ ನಡೆದಿದ್ದು ತನ್ನದೇ ಚಿಕ್ಕಪ್ಪನ ಪುತ್ರನ ಮೊಬೈಲ್ ಫೋನ್ ಕದ್ದಿದ್ದಾನೆಂಬ ಆರೋಪ ಬಾಲಕನ ಮೇಲೆ ಹೊರಿಸಲಾಗಿತ್ತು.

"ಮನೆಗೆ ಬಂದ ನಂತರ ತನಗಾದ ಹಿಂಸೆಯನ್ನು ಸೋದರ ತಿಳಿಸಿದ್ದ, ಆತನ ಸ್ಥಿತಿ ಬಿಗಡಾಯಿಸಿದ ನಂತರವಷ್ಟೇ ಆತನನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು" ಎಂದು ಪೂಜಾ ಹೇಳಿದ್ದಾಳೆ.

ಬಾಲಕ ಜನವರಿ 23ರಂದು ಮೃತಪಟ್ಟ ನಂತರ ಆತನ ಕುಟುಂಬ ಪೊಲೀಸರ ವಿರುದ್ಧ ದೂರು ನೀಡಿದ್ದರೂ ಇಲ್ಲಿಯ ತನಕ ಎಫ್‍ಐಆರ್ ದಾಖಲಾಗಿಲ್ಲ. ಆದರೆ ಪ್ರಕರಣ ಸಂಬಂಧ ಒಬ್ಬ ಪೊಲೀಸ್ ಹೊರಠಾಣೆ ಉಸ್ತುವಾರಿ ಹಾಗೂ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ವಜಾಗೊಳಿಸಲಾಗಿದೆ.

ಜನವರಿ 17ರಂದು ಅಪ್ರಾಪ್ತನ ವಿರುದ್ಧ ಆರೋಪ ಹೊರಿಸಲಾಗಿದ್ದರೆ ಜನವರಿ 19ರಂದು ಪೊಲೀಸರು ಆತನನ್ನು ಠಾಣೆಗೆ ಕರೆಸಿದ್ದರು. ಆ ಸಂದರ್ಭ ಪೊಲೀಸ್ ಠಾಣೆಗೆ ಆತನ ತಾಯಿ ಮತ್ತು ಗ್ರಾಮದ ಮುಖ್ಯಸ್ಥರೂ ತೆರಳಿದ್ದರು. ನಾಲ್ಕೈದು ಗಂಟೆಗಳಲ್ಲಿ ಆತನನ್ನು ಬಿಡುಗಡೆಗೊಳಿಸುವುದಾಗಿ ಪೊಲೀಸರು ತಿಳಿಸಿದ್ದರು. ಆತನ ಕುಟುಂಬ ಮತ್ತೆ ವಾಪಸಾದಾಗ ಆತ ನೋವಿನಿಂದ ನರಳುತ್ತಿದ್ದ. ಆತನ ಚಿಕ್ಕಪ್ಪ ಆತನ ಪರಿಸ್ಥಿತಿ ನೋಡಿ ದೂರು ವಾಪಸ್ ಪಡೆದು ಮನೆಯಲ್ಲಿಯೇ ವಿಷಯ ಇತ್ಯರ್ಥಪಡಿಸುವುದಾಗಿ ತಿಳಿಸಿದ್ದರು.

ಆದರೆ ಮನೆಗೆ ವಾಪಸಾದ ಬಾಲಕನಿಗೆ ಅಸಾಧ್ಯ ನೋವಿತ್ತು. ನೋವು ನಿವಾರಕ ಮಾತ್ರೆಗಳೂ ಆತನ ಪರಿಸ್ಥಿತಿ ಸುಧಾರಿಸಿರಲಿಲ್ಲ, ಆತನ ಪರಿಸ್ಥಿತಿ ಗಂಭೀರಗೊಂಡಾಗ ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿಯಲಿಲ್ಲ ಎಂದು ಆತನ ಕುಟುಂಬ ಹೇಳಿದೆ.ಆತನ ಸಾವಿನ ಸುದ್ದಿ ತಿಳಿದು ಗ್ರಾಮಸ್ಥರು ಪ್ರತಿಭಟಿಸಿದ್ದರು.

ಆದರೆ ಖೇರಿ ಎಸ್‍ಪಿ ಸಂಜೀವ್ ಸುಮನ್ ಈ ಕುರಿತು ವೀಡಿಯೋ ಸಂದೇಶ ಪೋಸ್ಟ್ ಮಾಡಿ, ಮೃತನನ್ನು 17 ವರ್ಷದ ಹುಡುಗ ಹಾಗೂ ಆತನನ್ನು ಎಲ್ಲರೆದುರು ವಿಚಾರಣೆ ನಡೆಸಲಾಗಿತ್ತು ಎಂದಿದ್ದಾರೆ ಹಾಗೂ ಬಾಲಕನ ತಾಯಿ ಮತ್ತಿತರರು ಆತನ ಚಿಕ್ಕಪ್ಪ ಹಾಗೂ ಇತರರು ಹಲ್ಲೆ ನಡೆಸಿದ್ದರು ಎಂದು ದೂರಿದ್ದಾರೆ ಎಂದು ಹೇಳಿದ್ದಾರೆ.

 ತನ್ನ ಪುತ್ರನ ವಿರುದ್ಧ ಸುಳ್ಳು ದೂರು ನೀಡಲಾಗಿತ್ತು ಹಾಗೂ ಆತನಿಗೆ ಹಲ್ಲೆ ನಡೆಸಲು ಪೊಲೀಸರಿಗೆ ಲಂಚ ನೀಡಲಾಗಿತ್ತು ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.

ಕೃಪೆ: Thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News