ಚುನಾವಣೆ ಸಂದರ್ಭ ಉಚಿತ ವಸ್ತುಗಳ ಆಶ್ವಾಸನೆಗಳ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ: ಕೇಂದ್ರ, ಚುನಾವಣಾ ಆಯೋಗಕ್ಕೆ ನೋಟಿಸ್

Update: 2022-01-25 12:39 GMT

ಹೊಸದಿಲ್ಲಿ: ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳು ಮತದಾರರಿಗೆ ಆಶ್ವಾಸನೆ ನೀಡುವ ʼಉಚಿತ ವಸ್ತುಗಳ' ಕುರಿತಾದ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಇಂದು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಇದೊಂದು ಗಂಭೀರ ವಿಚಾರ, ರಾಜಕೀಯ ಪಕ್ಷಗಳ ʼಫ್ರೀಬೀ' ಬಜೆಟ್ ಸಾಮಾನ್ಯ ಬಜೆಟ್ ಅನ್ನು ಮೀರುತ್ತಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ನಾಲ್ಕು ವಾರಗಳೊಳಗಾಗಿ ಪ್ರತಿಕ್ರಿಯೆ ನೀಡಬೇಕೆಂದು ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಈ ಕುರಿತಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಚುನಾವಣಾ ಆಯೋಗಕ್ಕೆ ಬೇರೊಂದು ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ತಿಳಿಸಿತ್ತು ಆದರೆ ಚುನಾವಣಾ ಆಯೋಗ ಇಲ್ಲಿಯ ತನಕ ಒಂದು ಸಭೆ ನಡೆಸಿದೆ. ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಅವರು ಕೇಳಿದ್ದರು, ಆದರೆ ಸಭೆಯ ಪರಿಣಾಮ ಮಾತ್ರ ತಿಳಿದು ಬಂದಿಲ್ಲ ಎಂದು ಹೇಳಿದೆ.

ಎಲ್ಲಾ ರಾಜಕೀಯ ಪಕ್ಷಗಳೂ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸುತ್ತಿವೆ, ಇದರಿಂದ ಸರಕಾರಗಳು ಇನ್ನಷ್ಟು ಸಾಲದ ಕೂಪಕ್ಕೆ ಬೀಳುತ್ತಿವೆ ಎಂದು ಹೇಳಿ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು  ಸಲ್ಲಿಸಿದ್ದ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಿದೆ. ಬೇಕಾಬಿಟ್ಟಿಯಾಗಿ ಉಚಿತ ವಸ್ತುಗಳನ್ನು ನೀಡುವ ಆಶ್ವಾಸನೆಯೊದಗಿಸುವ ಪಕ್ಷಗಳ ನೋಂದಣಿ ರದ್ದುಗೊಳಿಸಿ ಅವುಗಳ ಚಿಹ್ನೆಗಳನ್ನೂ ವಜಾಗೊಳಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News