ರಾಷ್ಟ್ರಧ್ವಜದ ಚಿತ್ರವಿರುವ ಉತ್ಪನ್ನ ಮಾರಾಟ: ಅಮೆಝಾನ್ ಅಧಿಕಾರಿ, ಮಾಲಕರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶ

Update: 2022-01-25 16:57 GMT

ಭೋಪಾಲ, ಜ. 25 : ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಶೂ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಆರೋಪದಲ್ಲಿ ಇ-ಕಾಮರ್ಸ್ ದೈತ್ಯ ಅಮೆಝಾನ್ ನ ಅಧಿಕಾರಿಗಳು ಹಾಗೂ ಅದರ ಮಾಲಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಸರಕಾರ ಪೊಲೀಸರಿಗೆ ನಿರ್ದೇಶಿಸಿದೆ ಎಂದು ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಮಂಗಳವಾರ ಹೇಳಿದ್ದಾರೆ.

ಅಮೆಝಾನ್ ಭಾರತದ ಧ್ವಜದ ಚಿತ್ರಗಳನ್ನು ಒಳಗೊಂಡ ಉಡುಪುಗಳು ಹಾಗೂ ಆಹಾರ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವಿಭಾಗ ಅಮೆಝಾನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ತ್ರಿವರ್ಣ ಧ್ವಜವನ್ನು ಈ ರೀತಿ ಬಳಸಿರುವುದು ಅವಮಾನ ಹಾಗೂ ದೇಶದ ಧ್ವಜ ಸಂಹಿತೆಯ ಉಲ್ಲಂಘನೆ ಎಂದು ಕೆಲವರು ಹೇಳಿದ್ದರು. 

‘‘ಆನ್‌ಲೈನ್ ಇ-ಕಾಮರ್ಸ್ ವೇದಿಕೆ ಅಮೆಝಾನ್ನಲ್ಲಿ ನಮ್ಮ ರಾಷ್ಟ್ರಧ್ವಜದ ಚಿತ್ರವಿರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಶೂಗಳ ಮೇಲೆ ಕೂಡ ರಾಷ್ಟ್ರ ಧ್ವಜವನ್ನು ಮುದ್ರಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಇದು ರಾಷ್ಟ್ರ ಧ್ವಜ ಸಂಹಿತೆಯ ಉಲ್ಲಂಘನೆ’’ ಎಂದು ರಾಜ್ಯ ಸರಕಾರದ ವಕ್ತಾರರಾಗಿರುವ ಮಿಶ್ರಾ ಅವರು ಹೇಳಿದ್ದಾರೆ.

‘‘ನಾನು ಅಮೆಝಾನ್ ನ ಅಧಿಕಾರಿಗಳು ಹಾಗೂ ಮಾಲಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದೇನೆ’’ ಎಂದು ಮಿಶ್ರಾ ಅವರು ಹೇಳಿದ್ದಾರೆ.

ಮಿಶ್ರಾ ಅವರು ಅಮೆಝಾನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸುತ್ತಿರುವುದು ಇದೇ ಮೊದಲಲ್ಲ. ಅಮೆಝಾನ್ ಮೂಲಕ ವಿಷಕಾರಿ ಸಲ್ಫಸ್ ಗುಳಿಗೆಗಳನ್ನು ತರಿಸಿಕೊಂಡು ಸೇವಿಸಿ ಮಧ್ಯಪ್ರದೇಶದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಅಮೆಝಾನ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕಳೆದ ನವೆಂಬರ್ನಲ್ಲಿ ಮಿಶ್ರಾ ಅವರು ಪೊಲೀಸರಿಗೆ ನಿರ್ದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News