ಚತ್ತೀಸ್ಗಢ್: ಎನ್ ಕೌಂಟರ್ ನಲ್ಲಿ ಯುವಕ ಸಾವು; 'ಮಾವೋವಾದಿʼ ಎಂಬ ಪೊಲೀಸರ ಆರೋಪ ನಿರಾಕರಿಸಿದ ಕುಟುಂಬ

Update: 2022-01-25 17:54 GMT

ಹೊಸದಿಲ್ಲಿ, ಜ. 25: ಚತ್ತೀಸ್ಗಢದ ನಾರಾಯಣಪುರದಲ್ಲಿ ಸೋಮವಾರ ಮಾವೋವಾದಿಗಳ ವಿರುದ್ಧ ನಡೆಸಿದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಮನು ನುರೇಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆತ ಮಾವೋವಾದಿ ಎಂಬುದನ್ನು ಮನು ನುರೇಟಿ ಕುಟುಂಬ ನಿರಾಕರಿಸಿದೆ. 

ಮಾವೋವಾದಿಗಳು ಹಾಗೂ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ನಡುವೆ ಬೆಳಗ್ಗೆ 1.30ಕ್ಕೆ ಗುಂಡಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಅನಾಮಿಕ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿತ್ತು. ತರುವಾಯ ಆತನನ್ನು ಮನು ನುರೇಟಿ ಎಂದು ಗುರುತಿಸಲಾಯಿತು. ಶಸ್ತ್ರಾಸ್ತ್ರಗಳು ಹಾಗೂ ಇತರ ವಸ್ತುಗಳು ಕೂಡ ಪತ್ತೆಯಾಗಿದ್ದವು ಎಂದು ನಾರಾಯಣಪುರ ಪೊಲೀಸರು ತಿಳಿಸಿದ್ದಾರೆ. 

‘‘ಭರಂದಾ ಪೊಲೀಸ್ ಠಾಣೆಯಿಂದ 3 ಕಿ.ಮೀ. ದೂರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ನಮ್ಮ ಡಿಆರ್‌ಜಿ ತಂಡದ ಮೇಲೆ ಮಾವೋವಾದಿಗಳು ಗುಂಡು ಹಾರಿಸಿದರು. ತಂಡ ಪ್ರತಿದಾಳಿ ನಡೆಸಿತು. ಅನಂತರ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರ, ಸ್ಫೋಟಕಗಳೊದಿಗೆ ಅನಾಮಿಕ ಮಾವೋವಾದಿಯ ಮೃತದೇಹ ಪತ್ತೆಯಾಗಿತ್ತು’’ ಎಂದು ಡಿಎಸ್‌ಪಿ ಅನುಜ್ ಕುಮಾರ್ ಅವರು ತಿಳಿಸಿದ್ದಾರೆ. 

ಆದರೆ, ಮನು ಮಾವೋವಾದಿ ಅಲ್ಲ ಎಂದು ಮನುವಿನ ಸಹೋದರ ಹಾಗೂ ಡಿಆರ್‌ಜಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಣು ನುರೇಟಿ ತಿಳಿಸಿದ್ದಾರೆ. ‘‘ಆತ ಬಸ್ತಾರ್ ಫೈಟರ್ಸ್ ಸದಸ್ಯ ಎಂದು ಅರ್ಜಿ ಸಲ್ಲಿಸಿದ್ದ. ನಾವೆಲ್ಲರೂ ಮಾವೋವಾದಿ ಪ್ರಭಾವಿತ ಪ್ರದೇಶದಿಂದ ಸ್ಥಳಾಂತರಗೊಂಡ ಜನರು. ಆದರೆ, ಆತನನ್ನು ತಪ್ಪಾಗಿ ಮಾವೋವಾದಿ ಎಂದು ಘೋಷಿಸಲಾಗಿದೆ’’ ಎಂದು ರೇಣು ನುರೇಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News