ಪದ್ಮಶ್ರೀ ನಿರಾಕರಿಸಿದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ: ಕಾರಣವೇನು ಗೊತ್ತೇ?

Update: 2022-01-26 11:49 GMT
ಸಂಧ್ಯಾ ಮುಖರ್ಜಿ (Photo: Facebook)

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಹಿರಿಯ ಗಾಯಕಿ, 90 ವರ್ಷದ ಸಂಧ್ಯಾ ಮುಖರ್ಜಿ ಅವರು ಸರಕಾರ ಘೋಷಿಸಿದ ಪದ್ಮಶ್ರೀ ಪುರಸ್ಕೃತರಲ್ಲಿ ಒಬ್ಬರಾಗಿದ್ದರೆ, ಈ ಪ್ರಶಸ್ತಿ ಕಿರಿಯ ಕಲಾವಿದರಿಗೆ ಸಲ್ಲಬೇಕು ತನ್ನಂತಹ ಹಿರಿಯರಿಗಲ್ಲ ಎಂದು ಹೇಳಿ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದಾರೆ.

ಪದ್ಮ ಪ್ರಶಸ್ತಿ ನಿರಾಕರಿಸಿದ ಪಶ್ಚಿಮ ಬಂಗಾಳದ ಎರಡನೇ ಗಣ್ಯ ವ್ಯಕ್ತಿ ಸಂಧ್ಯಾ ಅವರಾಗಿದ್ದಾರೆ. ಈಗಾಗಲೇ ರಾಜ್ಯದ ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಜಿ ಅವರು ತಮಗೆ ನೀಡಲಾದ ಪದ್ಮ ಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ತಿಳಿಸಲು ದಿಲ್ಲಿಯಿಂದ ಕರೆ ಮಾಡಿದ ಹಿರಿಯ ಅಧಿಕಾರಿಯೊಬ್ಬರಲ್ಲಿ ಸಂಧ್ಯಾ ಅವರು ತಾವು ಈ ಪ್ರಶಸ್ತಿ ಸ್ವೀಕರಿಸಲು ಸಿದ್ಧರಿಲ್ಲ, ಈ ವಯಸ್ಸಿನಲ್ಲಿ ಈ ಪ್ರಶಸ್ತಿ ನೀಡಿರುವುದರಿಂದ 'ಅವಮಾನ'ವಾಗಿದೆ ಎಂದು ಹೇಳಿದ್ದಾರೆಂದು ಗಾಯಕಿಯ ಪುತ್ರಿ ಸೌಮಿ ದಾಸಗುಪ್ತಾ ಹೇಳಿದ್ದಾರೆ.

ಪ್ರಧಾನಿಯ ಕಟು ಟೀಕಾಕಾರರಾಗಿರುವ ಬುದ್ಧದೇಬ್ ಭಟ್ಟಾಚಾರ್ಜಿ ಅವರು ಪ್ರಶಸ್ತಿಯನ್ನು ನಿರಾಕರಿಸಲು ರಾಜಕೀಯ ಕಾರಣಗಳಿದ್ದರೆ, ತಮ್ಮ ತಾಯಿಯ ನಿರ್ಧಾರದ ಹಿಂದೆ ರಾಜಕೀಯ ಕಾರಣಗಳಿಲ್ಲ ಎಂದು ಸೌಮಿ ಹೇಳಿದ್ದಾರೆ.

"ಪದ್ಮ ಶ್ರೀ  ಒಬ್ಬ ಕಿರಿಯ ಕಲಾವಿದರಿಗೆ ಸಲ್ಲಬೇಕು, 'ಗೀತಶ್ರೀ' ಸಂಧ್ಯಾ ಮುಖ್ಯೋಪಾಧ್ಯಾಯ ಅವರಿಗಲ್ಲ. ಆಕೆಯ ಕುಟುಂಬ ಮತ್ತು ಆಕೆಯ ಅಭಿಮಾನಿಗಳು ಹೀಗಂದುಕೊಂಡಿದ್ದಾರೆ,'' ಎಂದು ಗಾಯಕಿಯ ಪುತ್ರಿ ಹೇಳಿದ್ದಾರೆ.

ಬಂಗಾಳದ ಅಗ್ರ ಗಾಯಕಿಯಾಗಿರುವ ಸಂಧ್ಯಾ ಮುಖರ್ಜಿ (ಸಂಧ್ಯಾ ಮುಖ್ಯೋಪಾಧ್ಯಾಯ) ಅವರಿಗೆ 2011ರಲ್ಲಿ ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಬಾಂಗಾ ಬಿಭೂಷಣ್' ಅದು ಸ್ಥಾಪನೆಯಾದ ವರ್ಷದಂದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರದಾನ ಮಾಡಿದ್ದರು. ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಅವರು 1970ರಲ್ಲಿ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News