ಕ್ರೀಡಾ ಸಮುಚ್ಚಯಕ್ಕೆ ಟಿಪ್ಪುಸುಲ್ತಾನ್‌ ಹೆಸರು: ಪ್ರತಿಭಟಿಸಿದ ಬಿಜೆಪಿ, ಬಜರಂಗದಳ ಕಾರ್ಯಕರ್ತರು ಪೊಲೀಸ್‌ ವಶಕ್ಕೆ

Update: 2022-01-26 14:47 GMT
Photo: ANI

ಮುಂಬೈ: ಮುಂಬೈನ ಮಲಾಡ್‌ನಲ್ಲಿರುವ ಕ್ರೀಡಾ ಸಂಕೀರ್ಣಕ್ಕೆ ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

"ಕೋವಿಡ್ ಮಾರ್ಗಸೂಚಿಗಳ ವಿರುದ್ಧ ಸಭೆ ನಡೆಸಿದ್ದಕ್ಕಾಗಿ ನಾವು ಎರಡು ವಿಭಿನ್ನ ಸ್ಥಳಗಳಿಂದ ಬಿಜೆಪಿ ಮತ್ತು ಬಜರಂಗದಳದ 64 ಕಾರ್ಯಕರ್ತರನ್ನು ಬಂಧಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿಅಂಬೇಡ್ಕರ್ ಫೋಟೊ ತೆರವುಗೊಳಿಸಿದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆಂದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ!

ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಅಸ್ಲಂ ಶೇಖ್, "ಕಳೆದ 70 ವರ್ಷಗಳಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಯಾವುದೇ ಸಂಘರ್ಷ ನಡೆಯದ ಕಾರಣ ಭಾರತೀಯ ಜನತಾ ಪಕ್ಷವು ದೇಶವನ್ನು ಅಪಮಾನಿಸುವ ಸಲುವಾಗಿ ತನ್ನ ಗೂಂಡಾಗಳನ್ನು ಕಳುಹಿಸಿದೆ" ಎಂದು ಆರೋಪಿಸಿದ್ದಾರೆ.

"ಕಳೆದ 70 ವರ್ಷಗಳಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ, ಇಂದು ಬಿಜೆಪಿ ತನ್ನ ಗೂಂಡಾಗಳನ್ನು ಕಳುಹಿಸಿ ದೇಶಕ್ಕೆ ಮಾನಹಾನಿ ಮಾಡಲು ಮುಂದಾಗಿದೆ ಮತ್ತು ಯೋಜನೆಗಳ ಹೆಸರಿನ ಬಗ್ಗೆ ವಿವಾದವೆಬ್ಬಿಸಿ ದೇಶವನ್ನು ಅಭಿವೃದ್ಧಿ ಪಡಿಸಲು ಬಿಡುವುದಿಲ್ಲ. ನಾಮಕರಣದ ವಿಚಾರದಲ್ಲೆಲ್ಲಾ ನಾವು ವಿವಾದಕ್ಕೆ ಸಿಲುಕುವ ಅಗತ್ಯವಿಲ್ಲ" ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮಂಗಳವಾರ ಬೆಳಗ್ಗೆ, ಬಿಜೆಪಿ ಶಾಸಕ ಅತುಲ್ ಭಟ್‌ ಖಾಲ್ಕರ್ ಅವರು ಮುಂಬೈನ ಮಲಾಡ್‌ನಲ್ಲಿರುವ ಕ್ರೀಡಾ ಸಂಕೀರ್ಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ವಿರೋಧಿಸುವುದಾಗಿ ಘೋಷಿಸಿದ್ದರು ಮತ್ತು ಬೃಹನ್‌ಮುಂಬೈ ಮಹಾನಗರ ಪಾಲಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಮೈದಾನವನ್ನು ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು.

ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಗಣರಾಜ್ಯೋತ್ಸವದಂದು ಕಾಂಗ್ರೆಸ್ ನಾಯಕ ಮತ್ತು ಮುಂಬೈನ ಸಚಿವ ಅಸ್ಲಂ ಶೇಖ್ ಅವರ ಕ್ಷೇತ್ರದಲ್ಲಿ ಉದ್ಯಾನವನವನ್ನು ಉದ್ಘಾಟಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ವಕ್ತಾರ ಶ್ರೀರಾಜ್ ನಾಯರ್ ಮಾತನಾಡಿ, "ನಗರದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಸಂಕೀರ್ಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲಾಗುತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News