ಯುವತಿ ಜೊತೆ ಪ್ರಯಾಣಿಸಿದ್ದಕ್ಕೆ ಬಜರಂಗದಳದಿಂದ ಥಳಿತಕ್ಕೊಳಗಾಗಿದ್ದ ವ್ಯಕ್ತಿ ʼಮತಾಂತರ ನಿಷೇಧ ಕಾಯ್ದೆʼಯಡಿ ಬಂಧನ

Update: 2022-01-26 14:18 GMT

ಉಜ್ಜಯಿನಿ: ಹಿಂದೂ ಯುವತಿಯೊಂದಿಗೆ ರೈಲಿನಲ್ಲಿ ಸಂಚರಿಸುತ್ತಿದ್ದ ಮುಸ್ಲಿಂ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಬಲವಂತವಾಗಿ ಹೊರಕ್ಕೆ ಎಳೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಬಜರಂಗದಳದ ಕಾರ್ಯಕರ್ತರಿಂದ ದಾಳಿಗೊಳಗಾದ ಯುವಕನ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ ಎಂದು theprint.in ವರದಿ ಮಾಡಿದೆ. 

ಜೊತೆ ಸಂಚರಿಸುತ್ತಿದ್ದ ಹಿಂದೂ ಯುವತಿಯೇ ಯುವಕನ ವಿರುದ್ಧ ದೂರು ನೀಡಿದ್ದು, ಮತಾಂತರವಾಗುವಂತೆ ಯುವಕ ಬಲವಂತಪಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಯುವತಿ ನೀಡಿದ ದೂರಿನನ್ವಯ ಯುವಕನ ವಿರುದ್ಧ ಬಲವಂತದ ಮತಾಂತರದ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

ಜನವರಿ 14 ರಂದು ಯುವಕ ಮತ್ತು ಯುವತಿ ಸಂಚರಿಸುತ್ತಿದ್ದ ರೈಲಿಗೆ ಹತ್ತಿದ್ದ ಮಧ್ಯಪ್ರದೇಶದ ಉಜ್ಜಯಿನಿ ನಗರದ ಬಜರಂಗದಳ ಕಾರ್ಯಕರ್ತರು ಅಜ್ಮೀರ್‌ಗೆ ಹೋಗುತ್ತಿದ್ದವರನ್ನು ತಡೆದು ಬಲವಂತವಾಗಿ ರೈಲಿನಿಂದ ಇಳಿಸಿದ್ದರು. ಈ ಘಟನೆಯ ವಿಡಿಯೋ ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಯುವಕನನ್ನು ಆಸಿಫ್‌ ಶೇಖ್‌ ಎಂದು ಗುರುತಿಸಲಾಗಿದೆ. 

ಯುವಕನ ವಿರುದ್ಧ ಲವ್‌ ಜಿಹಾದ್‌ ಆರೋಪಿಸಿದ್ದ ಬಜರಂಗದಳ ಕಾರ್ಯಕರ್ತರು ನಂತರ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದರು. ಅವರ ಪೋಷಕರು ಬಂದ ಬಳಿಕ, ಹೇಳಿಕೆಗಳನ್ನು ಪಡೆದು ಅವರಿಬ್ಬರನ್ನೂ ಮನೆಗೆ ಕಳುಹಿಸಲಾಗಿತ್ತು.  ಇದೀಗ, ಯುವತಿಯೇ ಯುವಕನ ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ. ತನ್ನನ್ನು ಆಸಿಫ್‌ ಬ್ಲಾಕ್‌ಮೇಲ್‌ ಮಾಡಿ ಮತಾಂತರ ಆಗುವಂತೆ ಬಲವಂತಪಡಿಸಿದ್ದಾನೆ ಎಂದು ಯುವತಿ ದೂರು ನೀಡಿರುವುದಾಗಿ ಪೊಲೀಸ್‌ ಹೇಳಿದೆ. 
 
ಭಾರತೀಯ ದಂಡ ಸಂಹಿತೆ ಸೆಕ್ಷನ್ 384 (ಸುಲಿಗೆ) ಮತ್ತು ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಕಾಯಿದೆ, 2021 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೊವ್ ಪೊಲೀಸ್ ಠಾಣೆಯ ಉಸ್ತುವಾರಿ ಅರುಣ್ ಸೋಲಂಕಿ ಹೇಳಿದ್ದಾರೆ.

"ಆಸಿಫ್ ತನ್ನ ಆಕ್ಷೇಪಾರ್ಹ ಚಿತ್ರಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಮತ್ತು ಮತಾಂತರಕ್ಕೆ ಒತ್ತಡ ಹೇರುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ" ಎಂದು ಸೋಲಂಕಿ ಹೇಳಿದ್ದಾರೆ. ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಎಂದು ಸೋಲಂಕಿ ತಿಳಿಸಿರುವುದಾಗಿ The Indian Express ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News