ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಸೇನಾ ಜಮಾವಣೆ ಹಿನ್ನೆಲೆ: 8,500 ಯೋಧರ ಪಡೆಯನ್ನು ಕಟ್ಟೆಚ್ಚರದಲ್ಲಿರಿಸಿದ ಅಮೆರಿಕ

Update: 2022-01-26 16:40 GMT
  ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್, ಜ.26: ಉಕ್ರೇನ್ ಗಡಿಭಾಗದಲ್ಲಿ ರಶ್ಯಾದ ಸೇನಾ ಜಮಾವಣೆಯಿಂದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೂರ್ವ ಯುರೋಪ್‌ನಲ್ಲಿ ಸಂಭವನೀಯ ನಿಯೋಜನೆಗಾಗಿ ಅಮೆರಿಕ ತನ್ನ 8,500 ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ಸ್ಥಳೀಯವಾಗಿ ಹಲವು ಸಮಸ್ಯೆಗಳಿದ್ದರೂ ಮತ್ತೆ ಮುಂದಿನ ದಿನದಲ್ಲಿ ಅನ್ಯದೇಶಗಳ ವ್ಯವಹಾರದಲ್ಲಿ ಸಂಭವನೀಯ ಹಸ್ತಕ್ಷೇಪದ ಅಗತ್ಯವಿದೆಯೇ ಎಂಬ ಪ್ರಶ್ನೆಗಳೂ ಕೇಳಿಬಂದಿವೆ. ಉಕ್ರೇನ್ ಗಡಿಭಾಗದಲ್ಲಿ ಸುಮಾರು 1 ಲಕ್ಷ ಸೈನಿಕರನ್ನು ರಶ್ಯಾ ಜಮೆಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನೇಟೊ ಪಡೆಗಳು ಪೂರ್ವ ಯುರೋಪ್‌ಗೆ ಕ್ಷಿಪ್ರಕಾರ್ಯಪಡೆಯ ಹೆಚ್ಚುವರಿ ಯೋಧರನ್ನು ರವಾನಿಸಲು ನಿರ್ಧರಿಸಿರುವಂತೆಯೇ, ಅಮೆರಿಕದ 8,500 ಯೋಧರ ತುಕಡಿಯನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿರಿಸಿದ್ದು, ಯಾವುದೇ ಕ್ಷಣಕ್ಕೂ ಕಾರ್ಯಾಚರಣೆಗೆ ಸಿದ್ಧವಾಗಿರುವಂತೆ ಸೂಚಿಸಲಾಗಿದೆ. ‌

ಇದರಲ್ಲಿ ಯುದ್ಧತಂಡದ ಬ್ರಿಗೇಡ್, ಲಾಜಿಸ್ಟಿಕ್ಸ್ ಸಿಬಂದಿ, ವೈದ್ಯಕೀಯ ನೆರವು ತಂಡ, ವೈಮಾನಿಕ ನೆರವು ತಂಡ, ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ದಳ ಸೇರಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡಾ ಆಸ್ಟಿನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈ ಉಪಕ್ರಮ ನೇಟೋಗೆ ಅಮೆರಿಕದ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಈ ಮಧ್ಯೆ, ಅಮೆರಿಕದ ನಿರ್ಧಾರಕ್ಕೆ ಸ್ಥಳೀಯವಾಗಿ, ವಿಶೇಷವಾಗಿ ಟ್ರಂಪ್‌ರನ್ನು ಬೆಂಬಲಿಸುವ ರಿಪಬ್ಲಿಕನ್ಸ್ ಪಕ್ಷದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಮೆರಿಕದ ಅಧ್ಯಕ್ಷ ಬೈಡನ್ ಅವರ ಪುತ್ರ ಉಕ್ರೇನ್‌ನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ರಿಪಬ್ಲಿಕನ್ ಸದಸ್ಯರು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಮ್ಮ ನಮ್ಮ ಮಹನೀಯರು ತಪ್ಪೆಸಗಿದ್ದಾರೆ. ಆದರೆ ಈಗ ನಮ್ಮ ಪುತ್ರರು ಮತ್ತು ಪುತ್ರಿಯರಿಗಾಗಿ ತ್ಯಾಗ ಮಾಡುವ(ದೇಶದ ಹಿತಾಸಕ್ತಿಯನ್ನು) ಅವರ ನಿರ್ಧಾರ ಸರಿಯಾಗಿರಬಹುದು ಎಂದು ಅಮೆರಿಕದ ಸಂಸತ್ ಸದಸ್ಯತ್ವಕ್ಕೆ ಅಭ್ಯರ್ಥಿಯಾಗಿರುವ ಸಾಹಿತಿ ಜೆಡಿ ವೇನ್ಸ್ ಟ್ವೀಟ್ ಮಾಡಿದ್ದಾರೆ.

ಆದರೆ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಉದ್ದೇಶವಿಲ್ಲ ಎಂದು ರಶ್ಯಾ ಸ್ಪಷ್ಟಪಡಿಸಿದೆ. ಈ ಹಿಂದಿನ ಸೋವಿಯಟ್ ಒಕ್ಕೂಟದ ಅಂಗವಾಗಿದ್ದ ಉಕ್ರೇನ್ ದೇಶವನ್ನು ನೇಟೋ ಗುಂಪಿಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ಇದರಿಂದ ತಮ್ಮ ಭದ್ರತೆಗೆ ಆತಂಕ ಎದುರಾಗಿದೆ. ಈ ಪ್ರಯತ್ನ ಕೈಬಿಟ್ಟರೆ ಪರಿಸ್ಥಿತಿ ಸಹಜತೆಗೆ ಮರಳಲಿದೆ ಎಂದು ರಶ್ಯಾ ಹೇಳಿದೆ. ರಶ್ಯಾದ ಹೇಳಿಕೆಯನ್ನು ತಳ್ಳಿಹಾಕಿರುವ ಅಮೆರಿಕದ ವಿದೇಶಾಂಗ ಇಲಾಖೆ, ರಶ್ಯಾ 14 ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು ಇದರಲ್ಲಿ ಕೇವಲ 5 ಮಾತ್ರ ನೇಟೊ ಸದಸ್ಯರು ಎಂದು ಪ್ರತಿಕ್ರಿಯಿಸಿದೆ.

ಒಂದು ವೇಳೆ ಉಕ್ರೇನ್ ಮೇಲೆ ಆಕ್ರಮಣ ನಡೆದರೆ ಪ್ರತೀಕಾರ ಕ್ರಮ ನಡೆಯುತ್ತದೆ ಮತ್ತು ಇದರ ಪರಿಣಾಮ ಗಂಭೀರವಾಗಬಹುದು ಎಂದು ಫ್ರಾನ್ಸ್ ಅಧ್ಯಕ್ಷ ಮಾಕ್ರನ್ ಎಚ್ಚರಿಸಿದ್ದಾರೆ. ಉಕ್ರೇನ್ ಮೇಲೆ ದಾಳಿ ನಡೆದರೆ ಒಗ್ಗೂಡಿ ಪ್ರತಿಕ್ರಿಯಿಸುವುದಾಗಿ ಯುರೋಪಿಯನ್ ಮುಖಂಡರು ಒಮ್ಮತದಿಂದ ನಿರ್ಧರಿಸಿದ್ದಾರೆ. ಅಲ್ಲದೆ ರಶ್ಯಾ ವಿರುದ್ಧ ತೀವ್ರ ನಿರ್ಭಂಧ ವಿಧಿಸುವ ಬಗ್ಗೆಯೂ ನಿರ್ಧರಿಸಲಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಂಸತ್ತಿಗೆ ತಿಳಿಸಿದ್ದಾರೆ.

ರಶ್ಯಾ ನಿಯೋಜಿಸಿದ ಸೇನೆ ದೊಡ್ಡ ದಾಳಿ ನಡೆಸುವಷ್ಟಿಲ್ಲ ಎಂದ ಉಕ್ರೇನ್

ತನ್ನ ದೇಶದ ಗಡಿಯಲ್ಲಿ ರಶ್ಯಾ ನಿಯೋಜಿಸಿರುವ ಸೇನೆಯು ಪ್ರಮುಖ ದಾಳಿಗೆ ಸಾಕಾಗದು ಎಂದು ಉಕ್ರೇನ್‌ನ ವಿದೇಶ ವ್ಯವಹಾರ ಸಚಿವ ಡಿಮಿಟ್ರೊ ಕುಲೆಬಾ ಬುಧವಾರ ಹೇಳಿದ್ದಾರೆ.

ಉಕ್ರೇನ್‌ನ ಗಡಿಯುದ್ದಕ್ಕೂ ಮತ್ತು ಆಕ್ರಮಿತ ಉಕ್ರೇನ್ ಪ್ರದೇಶದಲ್ಲಿ ರಶ್ಯಾ ನಿಯೋಜಿಸಿದ ಸೇನೆ ಉಕ್ರೇನ್‌ಗೆ ನೇರ ಬೆದರಿಕೆಯಾಗಿದೆ. ಆದರೆ ಈ ಕ್ಷಣಕ್ಕೆ, ಇದು ಉಕ್ರೇನ್ ವಿರುದ್ಧದ ಪೂರ್ಣಪ್ರಮಾಣದ ದಾಳಿಗೆ ಸಾಲದು ಎಂದವರು ಹೇಳಿದ್ದಾರೆ. ಈ ಮಧ್ಯೆ, ರಶ್ಯಾದಿಂದ ಬೆದರಿಕೆ ಇರುವುದಾದರೂ, ಆಕ್ರಮಣ ಸನ್ನಿಹಿತವಾಗಿಲ್ಲ ಎಂದು ಉಕ್ರೇನ್‌ನ ಮುಖಂಡರು ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕ ಪಡುವ ಅಗತ್ಯವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಹೇಳುವುದಾದರೆ ರಶ್ಯಾ ತಕ್ಷಣ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿಲ್ಲ ಮತ್ತು ಈಗ ಉಕ್ರೇನ್ ಗಡಿಯಲ್ಲಿ ಜಮೆಗೊಂಡಿರುವ ರಶ್ಯಾದ ಪಡೆ ಗಡಿದಾಟಿ ಮುನ್ನುಗ್ಗಲು ಸಾಕಾಗದು ಎಂದು ಉಕ್ರೇನ್ ಅಧ್ಯಕ್ಷ ವ್ಲೊದೊಮಿರ್ ಝೆಲೆಂಸ್ಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News