ಮ.ಪ್ರ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡ್ರೋನ್ ಪತನ; ಇಬ್ಬರಿಗೆ ಗಾಯ

Update: 2022-01-26 16:52 GMT
ಸಾಂದರ್ಭಿಕ ಚಿತ್ರ | PTI

 

ಜಬಲ್ಪುರ, ಜ. 26: ಜಬಲ್ಪುರದ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಕೃಷಿ ಇಲಾಖೆಯ ಸ್ತಬ್ದಚಿತ್ರದ ಭಾಗವಾಗಿದ್ದ ಡ್ರೋನ್ ಪತನಗೊಂಡು ಇಬ್ಬರು ವೀಕ್ಷಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಡಿತ್ ರವಿಶಂಕರ್ ಶುಕ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬುಡಕಟ್ಟು ನೃತ್ಯ ಪ್ರದರ್ಶಿಸಲು ಜಬಲ್ಪುರಕ್ಕೆ ಆಗಮಿಸಿದ ಇಬ್ಬರು ಕಲಾವಿದರ ಮೇಲೆ ಡ್ರೋನ್ ಪತನಗೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘‘ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಡ್ರೋನ್ ಪತನಗೊಂಡ ಬಳಿಕ ಇಂದು ಕುಂಜಂ (38) ಹಾಗೂ ಗಂಗೋತ್ರಿ ಕುಂಜಂ (18) ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರೋಹಿತ್ ಕಶ್ವಾನಿ ತಿಳಿಸಿದ್ದಾರೆ.

ಗಾಯಗೊಂಡ ಇಬ್ಬರೂ ಬುಡಕಟ್ಟು ಜನರು. ಅವರು ದಿಂಡೋರಿ ಜಿಲ್ಲೆಯಿಂದ ಜಬಲ್ಪುರಕ್ಕೆ ಆಗಮಿಸಿದ್ದರು. ರಾಜ್ಯ ಕೃಷಿ ಇಲಾಖೆಯ ಸ್ತಬ್ದ ಚಿತ್ರದ ಭಾಗವಾಗಿದ್ದ ಡ್ರೋನ್ ಇವರಿಬ್ಬರ ಮೇಲೆ ಪತನಗೊಂಡಿತು ಎಂದು  ಅವರು ತಿಳಿಸಿದ್ದಾರೆ. ಕೃಷಿ ಇಲಾಖೆಯ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News