ಫ್ರಾನ್ಸ್: ಒಮೈಕ್ರಾನ್ ಸೋಂಕು ಉಲ್ಬಣ; ಒಂದೇ ದಿನ 5 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣ‌

Update: 2022-01-26 16:57 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್, ಜ.26: ಫ್ರಾನ್ಸ್‌ನಲ್ಲಿ ಮಂಗಳವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ 5,01,635 ಕೊರೋನ ಸೋಂಕು ಪ್ರಕರಣ ದಾಖಲಾಗಿದ್ದು ಇದೇ ಮೊದಲ ಬಾರಿಗೆ ದೈನಂದಿನ ಸೋಂಕು ಪ್ರಕರಣ ಅರ್ಧ ಮಿಲಿಯನ್ ಗಡಿ ದಾಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದರೊಂದಿಗೆ ಯುರೋಪ್ ದೇಶಗಳಲ್ಲಿ ಅತ್ಯಧಿಕ ಸೋಂಕು ಪ್ರಕರಣ ದಾಖಲಾದ ದೇಶ ಎನಿಸಿಕೊಂಡಿರುವ ಫ್ರಾನ್ಸ್ ನಲ್ಲಿ ಕಳೆದ 1 ವಾರದಲ್ಲಿ ಸರಾಸರಿ 3,60,000ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ. ದೇಶದಾದ್ಯಂತ 30,000ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಇದು 2020ರ ನವೆಂಬರ್ ಬಳಿಕದ ಅತ್ಯಧಿಕ ಪ್ರಮಾಣವಾಗಿದೆ. ಆದರೆ ತುರ್ತು ನಿಗಾ ಘಟಕದಲ್ಲಿ ದಾಖಲಾದವರ ಸಂಖ್ಯೆ 3,700ಕ್ಕಿಂತ ಸ್ವಲ್ಪ ಹೆಚ್ಚಿದೆ ಎಂದು ಸರಕಾರದ ಅಂಕಿಅಂಶ ವರದಿ ತಿಳಿಸಿದೆ. 

ಏಕಾಏಕಿ ಸೋಂಕು ಉಲ್ಬಣಗೊಳ್ಳಲು ಒಮೈಕ್ರಾನ್ ರೂಪಾಂತರಿ ಸೋಂಕು ಕಾರಣವಾಗಿರಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಕಳೆದ 24 ಗಂಟೆ (ಮಂಗಳವಾರ ಬೆಳಗ್ಗಿನವರೆಗೆ) 364 ಮಂದಿ ಮೃತಪಟ್ಟಿದ್ದು ಇದರೊಂದಿಗೆ ಸೋಂಕಿನಿಂದ ಮೃತರಾದವರ ಒಟ್ಟು ಸಂಖ್ಯೆ 1,29,489ಕ್ಕೇರಿದೆ. ದೇಶದಲ್ಲಿ ಸೋಮವಾರ ಕೋವಿಡ್ ಸೋಂಕಿಗೆ ಸಂಬಂಧಿಸಿದ ನೂತನ ನಿಯಮ ಜಾರಿಗೆ ಬಂದಿರುವಂತೆಯೇ ಸೋಂಕಿನ ಪ್ರಕರಣದಲ್ಲೂ ಹೆಚ್ಚಳವಾಗಿದೆ. ಹೊಸ ನಿಯಮದ ಪ್ರಕಾರ, ಬಾರ್, ರೆಸ್ಟೋರೆಂಟ್, ರೈಲು ಮತ್ತು ವಿಮಾನಕ್ಕೆ ಪ್ರವೇಶಿಸಬೇಕಿದ್ದರೆ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. 

ಫ್ರಾನ್ಸ್ ನ ಜನಸಂಖ್ಯೆಯ 77%ಕ್ಕೂ ಅಧಿಕ ಜನತೆ ಕೋವಿಡ್ ವಿರುದ್ಧದ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಈ ಮಧ್ಯೆ, ಫೆಬ್ರವರಿ 2ರಿಂದ ದೇಶದಲ್ಲಿ ಕೋವಿಡ್ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲಾಗುವುದು ಎಂದು ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಕಳೆದ ವಾರ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News