ಪುಟಿನ್ ಮೇಲೆ ನಿರ್ಬಂಧ ಹೇರಿಕೆ ವಿನಾಶಕಾರಿಯಾಗಲಿದೆ: ರಶ್ಯಾ ಎಚ್ಚರಿಕೆ
ಮಾಸ್ಕೊ, ಜ.26: ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ವೈಯಕ್ತಿಕ ನಿರ್ಬಂಧ ವಿಧಿಸುವುದರಿಂದ ಯಾವುದೇ ಪರಿಣಾಮ ಬೀರದು ಮತ್ತು ಉಕ್ರೇನ್‌ಗೆ ಸಂಬಂಧಿಸಿದ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಪ್ರಯತ್ನಗಳಿಗೆ ಪ್ರತಿಕೂಲವಾಗಲಿದೆ ಎಂದು ರಶ್ಯಾ ಬುಧವಾರ ಹೇಳಿದೆ.
ರಾಜಕೀಯವಾಗಿ ಇದು ನೋವಿನ ಸಂಗತಿಯಲ್ಲ, ವಿನಾಶಕಾರಿ ಉಪಕ್ರಮವಾಗಿದೆ. ಈ ವಿಷಯದ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದ ಅಮೆರಿಕದ ಸಂಸತ್ ಸದಸ್ಯರು ಮತ್ತು ಸೆನೆಟರ್‌ಗಳು ರಶ್ಯಾ ನಾಯಕತ್ವದ ಪ್ರತಿನಿಧಿಗಳ ಆಸ್ತಿಯನ್ನು ಸ್ಥಂಭನಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ . ಅವರಿಗೆ ತಜ್ಞ ತಿಳುವಳಿಕೆಯ ಕೊರತೆಯಿದೆ. ಯಾಕೆಂದರೆ ರಶ್ಯಾದ ಉನ್ನತ ಅಧಿಕಾರಿಗಳು ವಿದೇಶದಲ್ಲಿ ಆಸ್ತಿ ಹೊಂದುವುದನ್ನು ನಿಷೇಧಿಸಲಾಗಿದೆ ಎಂದು ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ಮಾಡಿದರೆ ರಶ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ವೈಯಕ್ತಿಕ ನಿರ್ಬಂಧ ಜಾರಿಗೊಳಿಸುವುದಾಗಿ ಅಮೆರಿಕ ನೀಡಿದ್ದ ಎಚ್ಚರಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.