ಮೆಕ್ಸಿಕೋದ ಮಾದಕವಸ್ತು ಕಳ್ಳಸಾಗಣೆದಾರನ ಶಿಕ್ಷೆ ಎತ್ತಿಹಿಡಿದ ನ್ಯಾಯಾಲಯ
Update: 2022-01-26 23:28 IST
ನ್ಯೂಯಾರ್ಕ್, ಜ.26: ಮೆಕ್ಸಿಕೋದ ಅಕ್ರಮ ಮಾದಕವಸ್ತು ವ್ಯವಹಾರದ ದೊರೆ ಎಂದೇ ಕುಖ್ಯಾತಿ ಪಡೆದಿದ್ದ ಜಾಖ್ವಿನ್ ‘ಎಲ್ ಚಾಪೊ’ ಗರ್ಮನ್‌ಗೆ ನೀಡಿದ್ದ ಶಿಕ್ಷೆಯನ್ನು ಅಮೆರಿಕದ ಅಪೀಲು ನ್ಯಾಯಾಲಯ ಮಂಗಳವಾರ ಎತ್ತಿಹಿಡಿದಿದ್ದು, ಹೊಸದಾಗಿ ವಿಚಾರಣೆ ಆರಂಭಿಸಬೇಕೆಂಬ ಮನವಿಯನ್ನು ತಿರಸ್ಕರಿಸಿದೆ.
25 ವರ್ಷಗಳಿಂದ ನೂರಾರು ಟನ್‌ಗಳಷ್ಟು ಕೊಕೈನ್ ಹಾಗೂ ಇತರ ಮಾದಕವಸ್ತುಗಳನ್ನು ಅಮೆರಿಕಕ್ಕೆ ಕಳ್ಳಸಾಗಾಣಿಕೆ ಮಾಡಿದ ಆರೋಪದಲ್ಲಿ ಗರ್ಮನ್‌ಗೆ 2019ರ ಫೆಬ್ರವರಿಯಲ್ಲಿ ಜೀವಾವಧಿ ಶಿಕ್ಷೆಯ ಜತೆ 30 ವರ್ಷದ ಜೈಲುಶಿಕ್ಷೆ ಮತ್ತು 12.6 ಬಿಲಿಯನ್ ಡಾಲರ್ ದಂಡ ವಿಧಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಮತ್ತು ಪ್ರಕರಣದ ವಿಚಾರಣೆ ಹೊಸದಾಗಿ ನಡೆಸುವಂತೆ ಕೋರಿ ಗರ್ಮನ್ ವಕೀಲರು ಮೇಲ್ಮನವಿ ಸಲ್ಲಿಸಿದ್ದರು.
ಈ ಮನವಿ ತಿರಸ್ಕರಿಸಿರುವ ಅಪೀಲು ನ್ಯಾಯಾಲಯ, ಶಿಕ್ಷೆಯನ್ನು ಎತ್ತಿಹಿಡಿದಿದೆ.