ಸರ್ಕಾರಿ ಒತ್ತಡದಿಂದಾಗಿ ಫಾಲೋವರ್ಸ್ ಗಳ ಸಂಖ್ಯೆಗೆ ನಿರ್ಬಂಧ: ಟ್ವಿಟ್ಟರ್ ವಿರುದ್ಧ ರಾಹುಲ್ ಕಿಡಿ

Update: 2022-01-27 01:51 GMT

ಹೊಸದಿಲ್ಲಿ: "ನನ್ನ ಧ್ವನಿಯನ್ನು ಅಡಗಿಸಲು ಸರ್ಕಾರದ ಒತ್ತಡದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ನನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗುತ್ತಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವಿಟ್ಟರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಘೋಷಿತವಾಗಿ ಫಾಲೋವರ್ಸ್ ಗಳ ಸಂಖ್ಯೆಗೆ ಮಿತಿ ಹೇರಲಾಗುತ್ತಿದೆ. ಜನರಿಗೂ ಈ ಬಗ್ಗೆ ತಿಳಿವಳಿಕೆ ಇದೆ ಎಂದು ಟ್ವಿಟ್ಟರ್‌ಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಟ್ವಿಟ್ಟರ್‌ನ ವಿಷಯ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಆರೋಪದಲ್ಲಿ ರಾಹುಲ್ ಅವರ ಟ್ವೀಟನ್ನು ಇತ್ತೀಚೆಗೆ ನಿಷೇಧಿಸಲಾಗಿತ್ತು. "ಟ್ವಿಟ್ಟರ್‌ನ ಅರಿಯದ ಸಂಕೀರ್ಣತೆಯು ಭಾರತದ ಮುಕ್ತ ಹಾಗೂ ನ್ಯಾಯಸಮ್ಮತ ಅಭಿವ್ಯಕ್ತಿಯನ್ನು ನಿರ್ಬಂಧಿಸುತ್ತಿದೆ ಎಂಬ ನಂಬಿಕೆ ನನ್ನದು. ನನಗೆ ಜನರಿಂದ ಲಭ್ಯವಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಟ್ವಿಟ್ಟರ್ ಇಂಡಿಯಾಗೆ ನನ್ನ ಧ್ವನಿಯನ್ನು ಅಡಗಿಸುವ ಬಗ್ಗೆ ಸರ್ಕಾರದಿಂದ ತೀವ್ರ ಒತ್ತಡ ಇದೆ" ಎಂದು ರಾಹುಲ್ ಅವರು, ಟ್ವಿಟ್ಟರ್ ಸಿಇಓ ಪರಾಗ್ ಅಗರ್‌ ವಾಲ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ವಕ್ತಾರರು ನಿರಾಕರಿಸಿದ್ದಾರೆ.

"ಉದಾರ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರತ್ವದ ನಡುವಿನ ಸಂಘರ್ಷ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿತವಾಗುತ್ತಿದೆ. ಇದು ಟ್ವಿಟ್ಟರ್‌ನಂಥ ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿರುವವರ ಮಲೆ ದೊಡ್ಡ ಹೊಣೆಯನ್ನು ಹೊರಿಸಿದೆ" ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟ್ಟರ್‌ನಲ್ಲಿ ಫಾಲೋವರ್ಸ್ ಗಳ ಬೆಳವಣಿಗೆ ದಿಢೀರನೇ ಹತ್ತಿಕ್ಕಲ್ಪಟ್ಟಿರುವುದು ದಿಗ್ಭ್ರಮೆಗೊಳಿಸಿದೆ. ಸುಮಾರು 20 ದಶಲಕ್ಷ ಫಾಲೋವರ್ಸ್ ಗಳೊಂದಿಗೆ ನನ್ನ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ. ಪ್ರತಿದಿನ 8 ರಿಂದ 10 ಸಾವಿರ ಫಾಲೋವರ್ಸ್ ಗಳು ಸೇರ್ಪಡೆಯಾಗುತ್ತಿದ್ದಾರೆ. 2021ರ ಜುಲೈವರೆಗೂ ಪ್ರತಿ ವರ್ಷ ಇದು ನಡೆಯುತ್ತಿತ್ತು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News