7 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ

Update: 2022-01-27 02:06 GMT

ಮುಂಬೈ: ನಕಲಿ ನೋಟುಗಳನ್ನು ಮುದ್ರಿಸಿ ವಿತರಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಬೇಧಿಸಿರುವ ಮುಂಬೈ ಪೊಲೀಸರು ಏಳು ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡು ಏಳು ಮಂದಿಯನ್ನು ಈ ಸಂಬಂಧ ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದಲ್ಲಿ ಮುಂಬೈ ಕ್ರೈಂಬ್ರಾಂಚ್‌ನ 11ನೇ ಘಟಕದ ಅಧಿಕಾರಿಗಳು ದಹಿಸಾರ್ ಚೆಕ್‌ಪೋಸ್ಟ್ ಬಳಿ ಕಾರೊಂದನ್ನು ಬೆನ್ನಟ್ಟಿ ಹಿಡಿದು ಈ ಅಪಾರ ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾರಿನಲ್ಲಿ ಇದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ಈ ಜಾಲದ ಬಗ್ಗೆ ಮಾಹಿತಿ ದೊರಕಿತು ಎಂದು ಪೊಲೀಸರು ಹೇಳಿದ್ದಾರೆ.

ಕಾರಿನಲ್ಲಿ ಶೋಧನೆ ನಡೆಸಿದಾಗ ಪೊಲೀಸರಿಗೆ 2000 ರೂ. ಮುಖಬೆಲೆಯ 5 ಕೋಟಿ ರೂ. ಮೊತ್ತದ 250 ಬಂಡಲ್‌ಗಳು ಸಿಕ್ಕಿದವು. ನಾಲ್ಕು ಮಂದಿಯ ವಿಚಾರಣೆ ನಡೆಸಿದಾಗ ಮತ್ತೆ ಮೂವರು ಸಹಚರರ ಬಗ್ಗೆ ಮಾಹಿತಿ ದೊರಕಿತು ಎಂದು ಪೊಲೀಸರು ವಿವರಿಸಿದ್ದಾರೆ. ಬಳಿಕ ಪೊಲೀಸರು ಅಂಧೇರಿ (ಪಶ್ಚಿಮ) ಉಪನಗರದ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿ 2 ಕೋಟಿ ರೂ. ಮುಖಬೆಲೆಯ 100 ಬಂಡಲ್‌ಗಳನ್ನು ವಶಪಡಿಸಿಕೊಂಡರು.

ಈ ನಕಲಿ ನೋಟುಗಳ ಜತೆ ಲ್ಯಾಪ್‌ ಟಾಪ್, ಏಳು ಮೊಬೈಲ್ ಫೋನ್‌ಗಳು, 28,170 ರೂ. ನೋಟುಗಳು, ಆಧಾರ್ ಮತ್ತು ಪಾನ್‌ಕಾರ್ಡ್, ಚಾಲನಾ ಲೈಸನ್ಸ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಅಂತರರಾಜ್ಯ ಜಾಲ ಎನ್ನುವುದು ತನಿಖೆಯ ವೇಳೆ ದೃಢಪಟ್ಟಿದೆ ಎಂದು ಡಿಸಿಪಿ ಸಂಗ್ರಾಮ್‌ ಸಿಂಗ್ ನಿಶಂದಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News