ಅಧಿಕೃತವಾಗಿ ʼಟಾಟಾ ಗ್ರೂಪ್‌ʼ ತೆಕ್ಕೆಗೆ ಬಿದ್ದ ಏರ್‌ ಇಂಡಿಯಾ; ಪ್ರಧಾನಿ ಮೋದಿ ಕೈಗೊಂಡ ʼಅಭಿವೃದ್ಧಿʼ ಕುರಿತು ಶ್ಲಾಘನೆ

Update: 2022-01-27 17:08 GMT

ಹೊಸದಿಲ್ಲಿ,ಜ.27: ಟಾಟಾ ಸಮೂಹವು ಗುರುವಾರ ಸರಕಾರದಿಂದ ಏರ್ ಇಂಡಿಯಾವನ್ನು ಅಧಿಕೃತವಾಗಿ ಹಸ್ತಾಂತರಿಸಿಕೊಂಡಿದೆ. ‘ಟಾಟಾ ಸಮೂಹದಲ್ಲಿ ಏರ್ ಇಂಡಿಯಾವನ್ನು ಮರಳಿ ಪಡೆದುಕೊಳ್ಳುತ್ತಿರುವುದು ನಮಗೆ ಅತೀವ ಸಂತಸವನ್ನಂಟು ಮಾಡಿದೆ ’ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್.ಚಂದ್ರಶೇಖರನ್ ಹೇಳಿದರು. ಅಧಿಕೃತ ಹಸ್ತಾಂತರಕ್ಕೆ ಮುನ್ನ ಚಂದ್ರಶೇಖರನ್ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದರು.

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸರಕಾರವು ಏರ್ ಇಂಡಿಯಾವನ್ನು 18,000 ಕೋ.ರೂ.ಗಳಿಗೆ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯ ಅಂಗ ಸಂಸ್ಥೆ ಟಾಲೇಸ್ ಪ್ರೈ.ಲಿ.ಗೆ ಮಾರಾಟ ಮಾಡಿತ್ತು. ಬಳಿಕ ಏರ್ ಇಂಡಿಯಾದಲ್ಲಿನ ಶೇ.100 ಪಾಲು ಬಂಡವಾಳವನ್ನು ಮಾರಾಟ ಮಾಡುವ ಸರಕಾರದ ಇಚ್ಛೆಯನ್ನು ದೃಢಪಡಿಸಿ ಟಾಟಾ ಸಮೂಹಕ್ಕೆ ಆಶಯ ಪತ್ರವನ್ನು ನೀಡಲಾಗಿತ್ತು. ಈ ವ್ಯವಹಾರಕ್ಕಾಗಿ ಶೇರು ಖರೀದಿ ಒಪ್ಪಂದಕ್ಕೆ ಕೇಂದ್ರ ಸರಕಾರವು ಸಹಿ ಮಾಡಿತ್ತು.

ಒಪ್ಪಂದದ ಅಂಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಎಸ್‌ಎಟಿಎಸ್‌ನಲ್ಲಿಯ ಶೇ.50ರಷ್ಟು ಪಾಲು ಬಂಡವಾಳವನ್ನೂ ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಗುತ್ತದೆ.

ಟಾಟಾ ಸಮೂಹವು ಹರಾಜಿನಲ್ಲಿ ಸ್ಪೈಸ್ ಜೆಟ್ ಪ್ರವರ್ತಕ ಅಜಯ ಸಿಂಗ್ ನೇತೃತ್ವದ ಒಕ್ಕೂಟವು ಸಲ್ಲಿಸಿದ್ದ 15,100 ಕೋ.ರೂ.ಗಳ ಬಿಡ್ ಮತ್ತು ಸರಕಾರವು ನಿಗದಿಗೊಳಿಸಿದ್ದ 12,906 ಕೋ.ರೂ.ಗಳ ಮೀಸಲು ಬೆಲೆಯನ್ನು ಹಿಂದಿಕ್ಕಿ ಏರ್ ಇಂಡಿಯಾವನ್ನು ತನ್ನದಾಗಿಸಿಕೊಂಡಿತ್ತು.

2003-04ರಿಂದೀಚಿಗೆ ಇದು ಮೊದಲ ಖಾಸಗೀಕರಣವಾಗಿದ್ದು,ಏರ್ ಇಂಡಿಯಾ ಟಾಟಾ ಸಮೂಹದ ಮೂರನೇ ವಿಮಾನಯಾನ ಸಂಸ್ಥೆಯಾಗಲಿದೆ. ಅದು ಈಗಾಗಲೇ ಏರ್ಏಷ್ಯಾ ಇಂಡಿಯಾ ಮತ್ತು ವಿಸ್ತಾರ ವಿಮಾನಯಾನ ಸಂಸ್ಥೆಗಳಲ್ಲಿ ಶೇ.51ರಷ್ಟು ಪಾಲು ಬಂಡವಾಳವನ್ನು ಹೊಂದಿದೆ.

ಏರ್ ಇಂಡಿಯಾದ ವಸಂತ ವಿಹಾರ ಹೌಸಿಂಗ್ ಕಾಲನಿ,ಮುಂಬೈನ ನರಿಮನ್ ಪಾಯಿಂಟ್‌ನಲ್ಲಿರುವ ಏರ್ ಇಂಡಿಯಾ ಕಟ್ಟಡ ಮತ್ತು ದಿಲ್ಲಿಯಲ್ಲಿಯ ಏರ್ ಇಂಡಿಯಾ ಕಟ್ಟಡದಂತಹ ಪ್ರಮುಖವಲ್ಲದ ಆಸ್ತಿಗಳ ಮೇಲೆ ಟಾಟಾ ಸಮೂಹಕ್ಕೆ ಹಕ್ಕು ಇರುವುದಿಲ್ಲ.

ಸದ್ಯ ಏರ್ ಇಂಡಿಯಾ ದೇಶಿಯ ವಿಮಾನ ನಿಲ್ದಾಣಗಳಲ್ಲಿ 4,400ಕ್ಕೂ ಅಧಿಕ ದೇಶಿಯ ಮತ್ತು 1,800 ಅಂತರರಾಷ್ಟ್ರೀಯ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಸ್ಲಾಟ್‌ಗಳು ಮತ್ತು ವಿದೇಶಗಳಲ್ಲಿ 900 ಸ್ಲಾಟ್‌ಗಳನ್ನು ನಿಯಂತ್ರಿಸುತ್ತಿದೆ.

ಟಾಟಾ ಸಮೂಹವು ಪಡೆಯಲಿರುವ ಏರ್ ಇಂಡಿಯಾದ 141 ವಿಮಾನಗಳ ಪೈಕಿ 42 ಲೀಸ್ ಆಧಾರದಲ್ಲಿದ್ದು,ಉಳಿದ 99 ವಿಮಾನಗಳು ಸ್ವಂತದ್ದಾಗಿವೆ.

ಕೇಂದ್ರ ಸರಕಾರವು ಕಳೆದೊಂದು ದಶಕದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾ ಜೀವ ಉಳಿಸಿಕೊಳ್ಳುವಂತಾಗಲು ನಗದು ಬೆಂಬಲ ಮತ್ತು ಸಾಲ ಖಾತರಿಗಳ ಮೂಲಕ 1.10 ಲ.ಕೋ.ಗೂ ಅಧಿಕ ಹಣವನ್ನು ಅದಕ್ಕೆ ಹರಿಸಿತ್ತು. ಹಾಲಿ ಏರ್ ಇಂಡಿಯಾ ದಿನವೊಂದಕ್ಕೆ 20 ಕೋ.ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ.

ಟಾಟಾಗಳು 1932ರಲ್ಲಿ ಟಾಟಾ ಏರ್‌ಲೈನ್ಸ್‌ನ್ನು ಅನ್ನು ಸ್ಥಾಪಿಸಿದ್ದು, 1946ರಲ್ಲಿ ಅದರ ಹೆಸರನ್ನು ಏರ್ ಇಂಡಿಯಾ ಎಂದು ಬದಲಿಸಲಾಗಿತ್ತು. 1953ರಲ್ಲಿ ಸರಕಾರವು ಏರ್ ಇಂಡಿಯಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತಾದರೂ ಜೆಆರ್‌ಡಿ ಟಾಟಾ ಅವರು 1977ರವರೆಗೂ ಅದರ ಅಧ್ಯಕ್ಷರಾಗಿ ಮುಂದುವರಿದಿದ್ದರು. ಇಂದಿನ ಹಸ್ತಾಂತರದಿಂದ ಏರ್ ಇಂಡಿಯಾ 67 ವರ್ಷಗಳ ಬಳಿಕ ತನ್ನ ತವರು ಟಾಟಾ ಸಮೂಹಕ್ಕೆ ಮರಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News