ಕೋವ್ಯಾಕ್ಸಿನ್, ಕೋವಿಶೀಲ್ಡ್ ಗೆ ಮಾರುಕಟ್ಟೆ ಅನುಮೋದನೆ, ಆದರೆ ಷರತ್ತುಗಳು ಅನ್ವಯ

Update: 2022-01-27 15:43 GMT
photo:PTI

ಹೊಸದಿಲ್ಲಿ,ಜ.27: ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ಯು ಗುರುವಾರ ಕೆಲವು ಷರತ್ತುಗಳಿಗೊಳಪಟ್ಟು ವಯಸ್ಕ ಜನರಲ್ಲಿ ಕೋವಿಡ್ ಲಸಿಕೆಗಳಾದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಬಳಕೆಗೆ ಮಾರುಕಟ್ಟೆ ಅನುಮೋದನೆಯನ್ನು ನೀಡಿದೆ. ‘ಹೊಸ ಔಷಧಿಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು,2019’ರಡಿ ಈ ಅನುಮೋದನೆಯನ್ನು ಮಂಜೂರು ಮಾಡಲಾಗಿದೆ.

ಈ ಬಗ್ಗೆ ಮಾಹಿತಿಯನ್ನು ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು,‘ಸಿಡಿಎಸ್‌ಸಿಒ ಈಗ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಗಳಿಗೆ ಅನುಮತಿಯನ್ನು ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಯಿಂದ ವಯಸ್ಕ ಜನಸಂಖ್ಯೆಯಲ್ಲಿ ಬಳಕೆಗೆ ಸಾಮಾನ್ಯ ಹೊಸ ಔಷಧಿಯನ್ನಾಗಿ ಮೇಲ್ದರ್ಜೆಗೇರಿಸಿದೆ ’ಎಂದು ಟ್ವೀಟಿಸಿದ್ದಾರೆ.

ಷರತ್ತುಗಳನ್ವಯ ಈ ಲಸಿಕೆಗಳನ್ನು ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಕೋವಿಶೀಲ್ಡ್) ಮತ್ತು ಭಾರತ್ ಬಯೊಟೆಕ್ (ಕೋವ್ಯಾಕ್ಸಿನ್) ಪ್ರಗತಿಯಲ್ಲಿರುವ ಕ್ಲಿನಿಕಲ್ ಟ್ರಯಲ್‌ಗಳ ದತ್ತಾಂಶಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಲಸಿಕೆ ನೀಡಿಕೆಯ ಬಳಿಕ ಅಡ್ಡಪರಿಣಾಮಗಳ ಮೇಲೆ ನಿಗಾ ಮುಂದುವರಿಸಬೇಕಾಗುತ್ತದೆ. ಲಸಿಕೆಗಳ ಪೂರೈಕೆಯನ್ನು ಕೋವಿನ್ ಪ್ಲಾಟ್‌ ಫಾರ್ಮ್‌ ನಲ್ಲಿ ನೋಂದಾಯಿಸುವುದು ಮತ್ತು ಷಾಣ್ಮಾಸಿಕ ಆಧಾರದಲ್ಲಿ ಸುರಕ್ಷತಾ ದತ್ತಾಂಶಗಳ ಸಲ್ಲಿಕೆಯನ್ನು ಮುಂದುವರಿಸುವುದು ಅಗತ್ಯವಾಗಿದೆ.

ಕೋವಾಕ್ಸಿನ್ ಮತ್ತು ಕೋವಿಶೀಲ್ಡ್  ಔಷಧಿ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲ, ಆದಾಗ್ಯೂ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಲಸಿಕೆಗಳನ್ನು ಖರೀದಿಸಿ ಸಾರ್ವಜನಿಕರಿಗೆ ನೀಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.

ಸರಕಾರದ ರಾಷ್ಟ್ರೀಯ ಆರೋಗ್ಯ ರಿಜಿಸ್ಟ್ರಿಯಲ್ಲಿ ನೋಂದಾಯಿಸಿಕೊಂಡಿರುವ ಮತ್ತು/ಅಥವಾ ನ್ಯಾಷನಲ್ ಅಕ್ರಿಡಿಟೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಷನ್ ಲ್ಯಾಬೊರೇಟರೀಸ್ (ಎನ್ಎಬಿಎಲ್)ನಿಂದ ಅನುಮತಿಯನ್ನು ಪಡೆದಿರುವ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಸದ್ಯದ ಮಟ್ಟಿಗೆ ಈ ಲಸಿಕೆಗಳನ್ನು ದಾಸ್ತಾನಿಟ್ಟುಕೊಳ್ಳಲು ಅವಕಾಶ ನೀಡಲಾಗಿದೆ. ಜನರಿಗೆ ಲಸಿಕೆ ನೀಡಿಕೆಯ ವಿವರಗಳನ್ನು ಕೋವಿನ್ ಪೋರ್ಟಲ್‌ನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದೂ ಮೂಲಗಳು ತಿಳಿಸಿದವು.

ಜ.3ರಂದು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೆ ತುರ್ತು ಬಳಕೆ ಅನುಮತಿಯನ್ನು ಮಂಜೂರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News