×
Ad

ಮೊಘಲರ ವಿರುದ್ಧ ಹೋರಾಡಿದ ಪರಂಪರೆ ಇರುವುದು ಬಿಜೆಪಿಗೆ ಮಾತ್ರ ಎಂದ ಅಮಿತ್ ಶಾ !

Update: 2022-01-28 07:19 IST

ಹೊಸದಿಲ್ಲಿ: ಜಾಟ್ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, "ಮೊಘಲರ ವಿರುದ್ಧ ಹೋರಾಡಿದ ಪರಂಪರೆ ಇರುವುದು ಬಿಜೆಪಿಗೆ ಮಾತ್ರ" ಎಂದು ಹೇಳಿದ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಟ್ ಸಮುದಾಯದ ಬಗ್ಗೆ ಬಿಜೆಪಿಗೆ ವಿಶೇಷ ಒಲವು ಇದೆ ಎಂದು ಅವರು ಹೇಳಿದ್ದಾರೆ.

ಹಿಂದೆ ಸಮುದಾಯದ ಮುಖಂಡರ ಜತೆ ನಡೆಸಿದ ಮಾತುಕತೆಯ ಬಗ್ಗೆ ಉಲ್ಲೇಖಿಸಿದ ಶಾ, "ನಮ್ಮ ಬಂಧ 650 ವರ್ಷದಷ್ಟು ಹಳೆಯದು ಎಂದು ನಾನು ಹೇಳಿದ್ದೆ. ಸಭೆಯ ಬಳಿಕ ಕೆಲವರು ಬಿಜೆಪಿಗೆ 50 ವರ್ಷವೂ ಆಗಿಲ್ಲ ಎಂದು ಕೇಳಿದರು. ನೀವು ಮೊಘಲರ ವಿರುದ್ಧ ಹೋರಾಡಿದ್ದೀರಿ. ನಾವು ಕೂಡಾ ಹೋರಾಡುತ್ತಿದ್ದೇವೆ ಎಂದು ನಾನು ಹೇಳಿದೆ" ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಮುಖವಾಗಿರುವ ಜಾಟ್ ಮತಗಳ ಬೇಟೆಗೆ ಮುಂದಾಗಿರುವ ಬಿಜೆಪಿ ದೆಹಲಿ ಸಂಸದ ಪರ್ವೇಶ್ ವರ್ಮಾ ಅವರ ಮನೆಯಲ್ಲಿ ನಡೆಸಿದ ಈ ಸಭೆಯಲ್ಲಿ ಗೃಹಸಚಿವರ ಹೇಳಿಕೆಯನ್ನು ಜಾಟ್ ಮುಖಂಡರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು ಎನ್ನಲಾಗಿದೆ.

ಇತ್ತೀಚೆಗೆ ವಾಪಾಸು ಪಡೆದ ಮೂರು ಹೊಸ ಕೃಷಿ ಕಾಯ್ದೆಗಳ ಕಾರಣದಿಂದ ಬಿಜೆಪಿ ಜತೆ ಜಾಟ್ ಸಮುದಾಯ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರನ್ನು ಓಲೈಸಲು ಬಿಜೆಪಿ ಮುಂದಾಗಿದೆ.

ಜಾಟ್ ಸಮುದಾಯದ ಮೇಲೆ ಪ್ರಭಾವ ಬೀರಬಲ್ಲ ಮುಖಂಡರ ಜತೆ ಶಾ ನಡೆಸಿದ ಸಭೆ ರಹಸ್ಯ ಸಭೆಯಾಗಿದ್ದು, ಇದರಲ್ಲಿ ಶಾ ಅವರು ನೀಡಿದರು ಎನ್ನಲಾದ ಹೇಳಿಕೆ ಬಗ್ಗೆ ಅಥವಾ ವೀಡಿಯೊದ ಅಧಿಕೃತತೆ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಾಗದು ಎಂದು ಬಿಜೆಪಿ ಮೂಲಗಳು ಹೇಳಿವೆ.

ಒಂದು ವೇಳೆ ಇಂಥ ಹೇಳಿಕೆ ನೀಡಿದ್ದಾರೆ ಎಂದಾದರೆ, ಈಗ ಪ್ರಸಾರವಾಗುತ್ತಿರುವ ವೀಡಿಯೊ ತಿರುಚಿದ ವೀಡಿಯೊ ಆಗಿರಬೇಕು ಎಂದು ಮುಖಂಡರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News