ಕೆಪಿಎಸ್ ಶಾಲೆಗಳು ಮಾದರಿ ಶಾಲೆಗಳಾಗಬೇಕು: ಸಿಇಓ ಡಾ.ನವೀನ್ ಭಟ್
ಉಡುಪಿ, ಜ.28: ಕೆ.ಪಿ.ಎಸ್ ಶಾಲೆಗಳು ವಿದ್ಯಾರ್ಥಿಗಳ ಶೈಕ್ಷಣಿಕ, ದೈಹಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಇತರೆ ಎಲ್ಲಾ ಶಾಲೆ ಗಳಿಗೆ ಮಾದರಿ ಶಾಲೆಯಾಗಬೇಕೆನ್ನುವ ಉದ್ದೇಶದಿಂದ, ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಜಿಲ್ಲಾಡಳಿತದ ವತಿಯಿಂದ ಸೂಕ್ತ ಸಹಕಾರ ನೀಡಲಾಗುವುದು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಹೇಳಿದ್ದಾರೆ.
ಇತ್ತೀಚೆಗೆ ಮಣಿಪಾಲದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ, ಕೆ.ಪಿ.ಎಸ್ ಶಾಲೆಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಕ್ಕೊಳಪಟ್ಟ ಪ್ರೌಢಶಾಲಾ ಮುಖ್ಯ ಶಿಕ್ಷಕ ರೊಂದಿಗೆ ನಡೆಸಿದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕೆ.ಪಿ.ಎಸ್ ಶಾಲೆಗಳ ಪ್ರಾಥಮಿಕ, ಪ್ರೌಢ ಶಾಲಾಮುಖ್ಯಸ್ಥರು ಹಾಗೂ ಪ್ರಾಂಶುಪಾಲರೊಂದಿಗೆ ಚರ್ಚಿಸಿ, ಶಾಲೆಗಳ ಶೈಕ್ಷಣಿಕ ಪ್ರಗತಿ ಹಾಗೂ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆ ಕುರಿತು ಮಾಹಿತಿ ಪಡೆದ ಸಿಇಓ, ಕೆ.ಪಿ.ಎಸ್ ಶಾಲೆಗಳ ಶೈಕ್ಷಣಿಕ ವೌಲ್ಯಮಾಪನ ಸಮಿತಿ ರಚಿಸಿ, ಚೆಕ್‌ಲಿಸ್ಟ್ ತಯಾರಿಸಿ ಪ್ರತೀ 15 ದಿನಗಳಿಗೊಮ್ಮೆ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಕ್ಕೊಳಪಟ್ಟ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ವಸತಿ ಸೌಲಭ್ಯದೊಂದಿಗೆ ಶಿಕ್ಷಣ ಪಡೆಯಲು ಸಹಕಾರಿ ಯಾಗುತ್ತದೆ ಎಂದರು.
ಜಿಲ್ಲೆಯ ಎಲ್ಲಾ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ನಿಧಾನಕಲಿಕೆಯ ವಿದ್ಯಾರ್ಥಿಗಳಿಗೆ ಸಂಜೆ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ವಹಿಸುವುದ ರೊಂದಿಗೆ ಗೈರುಹಾಜರಾಗುವ ಮತ್ತು ನಿಧಾನಕಲಿಕೆ ಮಕ್ಕಳ ಪೋಷಕರ ಸಹಕಾರ ಪಡೆದು ಅತ್ಯುತ್ತಮ ಫಲಿತಾಂಶ ದಾಖಲಿಸಲು ಪ್ರತೀ ಶಾಲೆಯವರು ಯೊೀಜನೆ ರೂಪಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪ್ರಭಾರ) ಗೋವಿಂದ ಮಡಿವಾಳ, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಚಂದ್ರಾ ನಾಯ್ಕಾ, ಕೆ.ಪಿ.ಎಸ್ ಶಾಲೆಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಕ್ಕೊಳಪಟ್ಟ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು