ಎಸ್ಸಿ/ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿಗಾಗಿ ಮಾನದಂಡ ವಿಧಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

Update: 2022-01-28 14:53 GMT

ಹೊಸದಿಲ್ಲಿ,ಜ.28: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸರಕಾರಿ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡಲು ಯಾವುದೇ ಮಾನದಂಡವನ್ನು ನಿಗದಿಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.

ಎಸ್ಸಿ ಮತ್ತು ಎಸ್ಟಿಗಳ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ರಾಜ್ಯಗಳು ಬದ್ಧವಾಗಿವೆ ಎಂದು ನ್ಯಾ.ನಾಗೇಶ್ವರ ರಾವ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಹೇಳಿತು.

‘ವಾದಗಳ ಆಧಾರದಲ್ಲಿ ನಿವೇದನೆಯನ್ನು ಆರು ಅಂಶಗಳಲ್ಲಿ ನಾವು ವಿಭಜಿಸಿದ್ದು, ಮಾನದಂಡವು ಒಂದಾಗಿದೆ. ಜನೈಲ್ ಸಿಂಗ್ ಮತ್ತು ನಾಗರಾಜ ಪ್ರಕರಣದ ಹಿನ್ನೆಲೆಯಲ್ಲಿ ಯಾವುದೇ ಮಾನದಂಡವನ್ನು ನಾವು ವಿಧಿಸಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ ’ಎಂದು ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಬಿ.ಆರ್.ಗವಾಯಿ ಅವರನ್ನೂ ಒಳಗೊಂಡಿದ್ದ ಪೀಠವು ತಿಳಿಸಿತು.

ಎಸ್ಸಿ/ಎಸ್ಟಿಗಳ ಪ್ರಾತಿನಿಧ್ಯದ ಅಸಮರ್ಪಕತೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಪೂರ್ಣ ಸೇವೆ ಅಥವಾ ವರ್ಗವನ್ನು ಉಲ್ಲೇಖಿಸದೆ ಸಂಗ್ರಹಿಸುವಂತಿಲ್ಲ,ಆದರೆ ಅದು ಬಡ್ತಿಯನ್ನು ಕೋರಿದ ದರ್ಜೆ/ವರ್ಗಕ್ಕೆ ಸಂಬಂಧಿಸಿರಬೇಕು ಎಂದು ಪೀಠವು ಹೇಳಿತು.

ಪ್ರಮಾಣಾತ್ಮಕ ಪ್ರಾತಿನಿಧ್ಯ ಮತ್ತು ಸಮರ್ಪಕತೆಯ ಪರೀಕ್ಷೆ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು,ತಾನು ಈ ಅಂಶವನ್ನು ಪರಿಶೀಲಿಸಿಲ್ಲ ಮತ್ತು ಬಡ್ತಿಯಲ್ಲಿ ಎಸ್ಸಿ/ಎಸ್ಟಿಗಳ ಪ್ರಾತಿನಿಧ್ಯದ ಅಸಮರ್ಪಕತೆಯ ವೌಲ್ಯಮಾಪನ ರಾಜ್ಯಗಳಿಗೆ ಬಿಟ್ಟ ವಿಷಯವಾಗಿದೆ ಎಂದು ತಿಳಿಸಿತು. ಸರ್ವೋಚ್ಚ ನ್ಯಾಯಾಲಯವು 2021,ಅ.2ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಎಸ್ಸಿ/ಎಸ್ಟಿಗಳಿಗೆ ಸೇರಿದ ಸರಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮತ್ತು ರಾಜ್ಯಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವಂತೆ ಕೇಂದ್ರವು ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News