ಮಹಾರಾಷ್ಟ್ರದ ಮಾಜಿ ಸಚಿವ‌ ಅನಿಲ್ ದೇಶಮುಖ್ ಮತ್ತು ಪುತ್ರರ ವಿರುದ್ಧ ವಿಚಾರಣೆಗೆ ಚಾಲನೆ‌

Update: 2022-01-28 16:29 GMT
ಅನಿಲ್ ದೇಶಮುಖ್

ಮುಂಬೈ,ಜ.28: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಜಾರಿ ನಿರ್ದೇಶನಾಲಯ (ಈ.ಡಿ.) ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಇಲ್ಲಿಯ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯವು ಶುಕ್ರವಾರ ವಿಚಾರಣೆಗಾಗಿ ಕೈಗೆತ್ತಿಕೊಂಡಿದೆ. ದೋಷಾರೋಪ ಪಟ್ಟಿಯನ್ನು ಗಮನಕ್ಕೆ ತೆಗೆದುಕೊಂಡ ಬಳಿಕ ವಿಶೇಷ ನ್ಯಾಯಾಧೀಶ ಆರ್.ಎನ್.ರೋಕಡೆ ಅವರು ವಿಚಾರಣೆ ಪ್ರಕ್ರಿಯೆಯನ್ನು ಆರಂಭಿಸುವಂತೆ ಸೂಚನೆಯನ್ನು ಹೊರಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ.ಕಳೆದ ವರ್ಷದ ಡಿಸೆಂಬರ್‌ನಲ್ಲಿ 7,000 ಪುಟಗಳ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

ದೇಶಮುಖ್ ಜೊತೆಗೆ ಅವರ ಇಬ್ಬರು ಪುತ್ರರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇದಕ್ಕೂ ಮುನ್ನ ದೇಶಮುಖ ಅವರ ಖಾಸಗಿ ಕಾರ್ಯದರ್ಶಿ ಸಂಜೀವ್ ಪಲಾಂಡೆ ಮತ್ತು ಆಪ್ತ ಸಹಾಯಕ ಕುಂದನ್ ಶಿಂದೆ ಸೇರಿದಂತೆ 14 ಆರೋಪಿಗಳ ವಿರುದ್ಧ ಈ.ಡಿ.ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

ಈ.ಡಿ.ಕಳೆದ ವರ್ಷದ ನ.1ರಂದು ದೇಶಮುಖರನ್ನು ಬಂಧಿಸಿದ್ದು,ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಗಳಲ್ಲಿ ಸಿಬಿಐ ಕಳೆದ ವರ್ಷದ ಎ.21ರಂದು ದೇಶಮುಖ ವಿರುದ್ಧ ಎಫ್ಐಆರ್ ದಾಖಲಿಸಿದ ಬಳಿಕ ಈ.ಡಿ.ಮಾಜಿ ಸಚಿವರು ಮತ್ತು ಅವರ ಸಹಚರರ ವಿರುದ್ಧ ತನಿಖೆಯನ್ನು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News