ಇತಿಹಾಸದಲ್ಲೇ ಪ್ರಥಮ; ರಷ್ಯಾದಲ್ಲಿ ದಾಖಲೆ 10 ಲಕ್ಷ ಜನಸಂಖ್ಯೆ ಕುಸಿತ !

Update: 2022-01-29 01:58 GMT
 ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಮಾಸ್ಕೊ: ರಷ್ಯಾದ ಜನಸಂಖ್ಯೆ 2021ರಲ್ಲಿ ಹತ್ತು ಲಕ್ಷದಷ್ಟು ಕುಸಿದಿದೆ ಎಂದು ದೇಶದ ಅಂಕಿ ಸಂಖ್ಯೆಗಳ ಸಂಸ್ಥೆಯಾದ ರೊಸ್ಟಾಟ್ ಪ್ರಕಟಿಸಿದೆ. ಸೋವಿಯತ್ ಒಕ್ಕೂಟ ಪತನದ ಬಳಿಕ ರಷ್ಯಾದಲ್ಲಿ ಬೃಹತ್ ಪ್ರಮಾಣದಲ್ಲಿ ಜನಸಂಖ್ಯೆ ಕುಸಿದ ಮೊದಲ ನಿದರ್ಶನ ಇದಾಗಿದೆ.

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಮೊದಲ ಪ್ರಕರಣ ದಾಖಲಾದ ಬಳಿಕ ಇದುವರೆಗೆ 6.60 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿರುವುದು ಜನಸಂಖ್ಯೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

2020ರಲ್ಲಿ ದೇಶದ ಜನಸಂಖ್ಯೆ 5 ಲಕ್ಷದಷ್ಟು ಕಡಿಮೆಯಾಗಿದ್ದು, 2021ರಲ್ಲೂ ಇದೇ ಪ್ರವೃತ್ತಿ ಮುಂದುವರಿದಿದೆ.
ರೋಸ್ಟಾಟ್ ಬಿಡುಗಡೆ ಮಾಡುವ ಕೋವಿಡ್-19 ಸೋಂಕಿತರ ಸಾವಿನ ಅಂಕಿ ಸಂಖ್ಯೆಗಳು ಸರ್ಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಕೋವಿಡ್ ಸಾವಿನ ಸಂಖ್ಯೆಗಿಂತ ಅಧಿಕ ಇದೆ.

ಸರ್ಕಾರಿ ವೆಬ್‌ಸೈಟ್‌ನ ಪ್ರಕಾರ, ದೇಶದಲ್ಲಿ 3,29,443 ಮಂದಿಯ ಸಾವಿಗೆ ಕೊರೋನ ವೈರಸ್ ಸೋಂಕು ಪ್ರಾಥಮಿಕ ಕಾರಣವಾಗಿದೆ. ಈ ವ್ಯತ್ಯಾಸ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಸರ್ಕಾರ ಸಾಂಕ್ರಾಮಿಕದ ತೀವ್ರತೆಯನ್ನು ಕಡೆಗಣಿಸಿದೆ ಎಂದು ವಿಶ್ವಾದ್ಯಂತ ಟೀಕೆಗಳು ವ್ಯಕ್ತವಾಗಿವೆ.

ಸಾಂಕ್ರಾಮಿಕದಿಂದಾದ ಸಾವು ಈಗಾಗಲೇ ಜನಸಂಖ್ಯಾ ಸಂಘರ್ಷವನ್ನು ಎದುರಿಸುತ್ತಿರುವ ದೇಶದ ಸಮಸ್ಯೆ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ. ಕಡಿಮೆ ನಿರೀಕ್ಷಿತ ಜೀವಿತಾವಧಿ ಮತ್ತು ಜನನ ದರ ಪ್ರಮಾಣ ಇಳಿಕೆ ದೇಶ ಕಳೆದ 30 ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಆರ್ಥಿಕ ಅನಿಶ್ಚಿತತೆ ಕಾರಣದಿಂದ 1990ರಿಂದೀಚೆಗೆ ಜನನ ದರ ಇಳಿಕೆಯಾಗುತ್ತಿದೆ. ಪ್ರತಿ ಮಹಿಳೆಗೆ ಜನನ ಪ್ರಮಾಣ ಸುಮಾರು 1.5ರಷ್ಟಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಅಗತ್ಯವಾಗಿರುವ ಕನಿಷ್ಠ ಜನನ ದರ 2.1ಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ.

ಅಧ್ಯಕ್ಷ ಪುಟಿನ್ ಅವರು ಪ್ರತಿ ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾಡುವ ಭಾಷಣದಲ್ಲೂ, ರಷ್ಯನ್ನರು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಲು ಉತ್ತೇಜಿಸಬೇಕು ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಂಡು ನಿರೀಕ್ಷಿತ ಜೀವಿತಾವಧಿ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News