ವಿಹಾರ ನೌಕೆಯಲ್ಲಿ ಅತ್ಯಾಚಾರ ಆರೋಪ: ಗಾಯಕ ಕ್ರಿಸ್ ಬ್ರೌನ್ ವಿರುದ್ಧ ದೂರು

Update: 2022-01-29 02:28 GMT
ಕ್ರಿಸ್ ಬ್ರೌನ್

ಲಾಸ್ ಎಂಜಲೀಸ್: ಖ್ಯಾತ ಗಾಯಕ ಕ್ರಿಸ್ ಬ್ರೌನ್ ತನ್ನನ್ನು ವಿಹಾರನೌಕೆಯಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿ, ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿದ್ದಾಗಿ ಮಹಿಳೆಯೊಬ್ಬರು ಕ್ಯಾಲಿಫೋರ್ನಿಯಾದಲ್ಲಿ ದೂರು ನೀಡಿದ್ದಾರೆ.

ನ್ಯಾಯಾಲಯದಲ್ಲಿ ದಾಖಲಿಸಿರುವ ಸಿವಿಲ್ ದಾವೆಯಲ್ಲಿ ತಮ್ಮ ಹೆಸರನ್ನು ಜೇನ್ ಡೋಯ್ ಎಂದಷ್ಟೇ ಗುರುತಿಸಿಕೊಂಡಿರುವ ಸಂತ್ರಸ್ತ ಮಹಿಳೆ, ಖ್ಯಾತ ಆರ್ ಆ್ಯಂಡ್ ಬಿ ತಾರೆಯಿಂದ 20 ದಶಲಕ್ಷ ಡಾಲರ್ ನಷ್ಟ ಪರಿಹಾರ ದೊರಕಿಸಿಕೊಡುವಂತೆ ಕೋರಿದ್ದಾರೆ. ರ‍್ಯಾಪ್ ಮೊಗಲ್ ಡಿಡ್ಡಿಯ ಫ್ಲೋರಿಡಾ ನಿವಾಸದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಗುರುವಾರ ಸಿವಿಲ್ ದಾವೆ ಸಲ್ಲಿಸಲಾಗಿದ್ದು, ಮಹಿಳೆ ತನ್ನನ್ನು ಕೊರಿಯೋಗ್ರಾಫರ್, ಡ್ಯಾನ್ಸರ್, ಮಾಡೆಲ್ ಮತ್ತು ಸಂಗೀತ ಕಲಾವಿದೆ ಎಂದು ಹೇಳಿಕೊಂಡಿದ್ದಾರೆ.

2020ರ ಡಿಸೆಂಬರ್ 30ರಂದು ಮಿಯಾಮಿಯಿಂದ ಆಗಮಿಸಿದ ತಕ್ಷಣ ಈ ವಿಹಾರ ನೌಕೆಗೆ ಬ್ರೌನ್ ಆಹ್ವಾನಿಸಿದ್ದರು ಎನ್ನಲಾಗಿದೆ. ಹೋದ ತಕ್ಷಣ ನನಗೆ ಮದ್ಯ ನೀಡಲಾಗಿದ್ದು, ತಕ್ಷಣ ತಾನು ದಿಗ್ಭ್ರಮೆಗೊಂಡಿದ್ದಾಗಿ ಮತ್ತು ದೈಹಿಕವಾಗಿ ಅಸ್ಥಿರವಾಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಬಳಿಕ ಬ್ರೌನ್ ಪ್ರತಿರೋಧದ ನಡುವೆಯೂ ಅತ್ಯಾಚಾರ ಎಸಗಿದರು ಎಂದು ಆಪಾದಿಸಲಾಗಿದೆ.

ತೀವ್ರ ಮುಜುಗರಕ್ಕೆ ಒಳಗಾದ ತಮ್ಮ ಕಕ್ಷಿದಾರರು ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಮಹಿಳೆಯ ವಕೀಲರಾದ ಏರಿಯಲ್ ಮಿಚೆಲ್ ಮತ್ತು ಜಾರ್ಜ್ ವ್ರೆಬೆಕ್ ಹೇಳಿದ್ದಾರೆ. ಈ ಬಗ್ಗೆ ಅಪರಾಧ ಪ್ರಕರಣವನ್ನೂ ದಾಖಲಿಸಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಮಹಿಳೆಯ ಪರ ವಕೀಲರಿಂದ ಯಾವುದೇ ಉತ್ತರ ಬಂದಿಲ್ಲ.
ಈ ದಾವೆಯ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇನ್‌ಸ್ಟಾಗ್ರಾಂನಲ್ಲಿ ಗ್ರಾಮಿ ಪ್ರಶಸ್ತಿ ವಿಜೇತ ಗಾಯಕ "ಐ ಹೋಪ್ ಯಾಲ್ ಸೀ ದ ಪ್ಯಾಟರ್ನ್ ಆಫ್ (ಬ್ಲೂ ಕ್ಯಾಪ್ ಎಮೋಜಿ) ಎಂದು ಬರೆದಿದ್ದಾರೆ. ಅಸತ್ಯದ ಸಂಕೇತವಾಗಿ ನೀಲಿ ಟೊಪ್ಪಿಯ ಎಮೋಜಿ ಬಳಸಲಾಗುತ್ತದೆ. ನಾನು ಹೊಸ ಮ್ಯೂಸಿಕ್ ಅಥವಾ ಪ್ರಾಜೆಕ್ಟ್‌ಗಳನ್ನು ಬಿಡುಗಡೆ ಮಾಡಿದಾಗಲೆಲ್ಲ ’ಅವರು’ ಕೆಲ ಸುಳ್ಳಿನ ಕಂತೆಯನ್ನು ಎಳೆದು ತರಲು ಪ್ರಯತ್ನಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ’ಅವರು’ ಯಾರು ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News