ಭೌತಶಾಸ್ತ್ರಜ್ಞ, ಮಾನವ ಹಕ್ಕುಗಳ ಕಾರ್ಯಕರ್ತ ಜೆ ಎಸ್ ಬಂದುಕ್ವಾಲಾ ನಿಧನ

Update: 2022-01-29 13:22 GMT

ವಡೋದರ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಭೌತಶಾಸ್ತ್ರ ಪ್ರಾಧ್ಯಾಪಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಜೆ ಎಸ್ ಬಂದುಕ್ವಾಲಾ ಅವರು ವಡೋದರಾದ ಪ್ರತಾಪ್‌ಗುಂಜ್ ಪ್ರದೇಶದ ಅವರ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮುಸ್ಲಿಂ ಸಮುದಾಯದೊಳಗೆ ಸುಧಾರಣೆಗಳ ಪ್ರತಿಪಾದಕರಾಗಿದ್ದ ಅವರಿಗೆ ಸಾಯುವಾಗ 77 ವರ್ಷವಾಗಿತ್ತು.

ಒಂಟಿಯಾಗಿ ವಾಸಿಸುತ್ತಿದ್ದ ಬಂದುಕ್ವಾಲಾ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ವೈದ್ಯ ಡಾ. ಮೊಹಮ್ಮದ್ ಹುಸೇನ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

 “ಅವರಿಗೆ ಇತರ ಕಾಯಿಲೆಗಳ ಜೊತೆಗೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಇದ್ದವು. ಅವರು ಇತ್ತೀಚಿನ ದಿನಗಳಲ್ಲಿ ಆಲ್ಝೈಮರ್ನಿಂದಲೂ (Alzheimer) ಬಳಲುತ್ತಿದ್ದರು. ಅವರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರಿಂದ ಕಳೆದ ಒಂದು ವಾರದಿಂದ ನಾವು ಅವರ ನಿವಾಸದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದ್ದೇವು. ಕಳೆದ ಕೆಲವು ದಿನಗಳಲ್ಲಿ ಅವರಿಗೆ ಸೆಪ್ಟಿಸೆಮಿಯಾ ಕಾಣಿಸಿಕೊಂಡಿತು. ನಿನ್ನೆ ಸಂಜೆ ಅವರನ್ನು ಆಸ್ಪತ್ರೆಗೆ ಸೇರಿಸಲು ನಾವು ಮನವೊಲಿಸಲು ಪ್ರಯತ್ನಿಸಿದ್ದೆವು. ಆದರೆ, ಇಂದು ಬೆಳಿಗ್ಗೆ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ” ಎಂದು ಹುಸೇನ್‌ ತಿಳಿಸಿದ್ದಾರೆ.

ಬಾಂಬೆ ಯುನಿವರ್ಸಿಟಿಯಿಂದ ಪದವೀಧರರಾಗಿರುವ ಅವರು ಭೌತಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿದ್ದರು. 1981ರಲ್ಲಿ ವಡೋದರದ ಮಹಾರಾಜ ಸಾಯಾಜಿ ರಾವ್‌ ವಿಶ್ವವಿದ್ಯಾಲಯ ಒಕ್ಕೂಟದ ಅಧ್ಯಕ್ಷರಾಗಿ, ದಲಿತ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿಂತರು. ಅವರು ಮುಸ್ಲಿಂ ಸಮುದಾಯದ ಘೆಟ್ಟೋಲೈಸೇಶನ್ ಪರಿಕಲ್ಪನೆಯನ್ನು ಬಲವಾಗಿ ವಿರೋಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News