ರಾಜಕೀಯ ಸಂಘರ್ಷದ ನಡುವೆ ಇಟೆಲಿ ಅಧ್ಯಕ್ಷರ ಮರು ಆಯ್ಕೆ
ರೋಮ್: ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಯೂರೋಪ್‌ನ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಇಟೆಲಿಯಲ್ಲಿ ಅಧ್ಯಕ್ಷ ಸೆರ್ಗಿಯೊ ಮಟ್ಟರೆಲ್ಲಾ ಮತ್ತೊಂದು ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಮಟ್ಟರೆಲ್ಲಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ವಿಫಲರಾದ ಬಳಿಕ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟು ಇದರಿಂದ ಶಮನಗೊಂಡಂತಾಗಿದೆ.
80 ವರ್ಷ ವಯಸ್ಸಿನ ಮಟ್ಟರೆಲ್ಲಾ ಅವರ ಆಯ್ಕೆಯೊಂದಿಗೆ ಪ್ರಧಾನಿ ಮಾರಿಯೊ ಡ್ರಾಘಿ ಅವರ ಬಡ್ತಿಯ ನಿರೀಕ್ಷೆಯಲ್ಲಿ ಹಲವು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಕಸರತ್ತುಗಳಿಗೆ ತೆರೆ ಬಿದ್ದಂತಾಗಿದೆ. ಈ ಸೂಕ್ಷ್ಮ ಕಾಲಘಟ್ಟದಲ್ಲಿ ಪ್ರಧಾನಿ ಮಾರಿಯೊ ಡ್ರಾಫಿಯವರ ಬಡ್ತಿ, ದೇಶದ ಸರ್ಕಾರಕ್ಕೆ ಚುಕ್ಕಾಣಿ ಇಲ್ಲದಂತಾಗುವ ಸ್ಥಿತಿಗೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಮಟ್ಟರೆಲ್ಲಾ ಗೆಲುವಿಗೆ 505 ಅಥವಾ ಅಧಿಕ ಮತಗಳ ಅಗತ್ಯವಿತ್ತು. ಆದರೆ 759 ಮತ ಗಳಿಸಿದ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವ ಅರ್ಹತೆ ಪಡೆದರು.
ಸಂವಿಧಾನಾತ್ಮಕ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಮಟ್ಟರೆಲ್ಲಾ ಎರಡನೇ ಅವಧಿಗೆ ಸ್ಪರ್ಧಿಸುವ ಸಾಧ್ಯತೆಯನ್ನು ಪದೇ ಪದೇ ತಳ್ಳಿಹಾಕುತ್ತಾ ಬಂದಿದ್ದರು. ಆದರೆ ಇಟೆಲಿಯ ರಾಜಕೀಯ ಪಕ್ಷಗಳು ಮತ್ತೊಬ್ಬ ಸೂಕ್ತ ಅಭ್ಯರ್ಥಿಯನ್ನು ಗುರುತಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಶನಿವಾರ ಮಟ್ಟರೆಲ್ಲಾ ಅವರನ್ನು ಚುನಾಯಿಸಲಾಯಿತು. ಮತದಾನಕ್ಕೆ ಮುನ್ನ ಮಾತನಾಡಿದ ಅವರು, "ನನ್ನ ಯೋಜನೆ ಬೇರೆ ಇತ್ತು; ಆದರೆ ಅಗತ್ಯ ಬಿದ್ದಲ್ಲಿ ನಾನು ಲಭ್ಯ" ಎಂಬ ಸಂದೇಶ ರವಾನಿಸಿದ್ದರು. ಬುಧವಾರ ಅಥವಾ ಗುರುವಾರ ಅವರು ಪ್ರಮಾಣ ವಚನ ಸ್ವೀಕರಿಸುವರು. ಮಟ್ಟರೆಲ್ಲಾ ಅವರ ಆಯ್ಕೆ ಏಳು ವರ್ಷದ ಪೂರ್ಣ ಅವಧಿಗೆ ಆಗಿದ್ದು, ಅವರು ಅದಕ್ಕೂ ಮುನ್ನವೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಸಂವಿಧಾನ ತಜ್ಞ ಗ್ಯಾಟನೊ ಅಝಿರಿಟಿ ಅಭಿಪ್ರಾಯಪಟ್ಟಿದ್ದಾರೆ.