ಸತ್ಯ ಇರುವಲ್ಲಿ ಬಾಪು ಇಂದಿಗೂ ಜೀವಂತ: ರಾಹುಲ್ ಗಾಂಧಿ
ಹೊಸದಿಲ್ಲಿ, ಜ. 30: ಒಬ್ಬ ಹಿಂದುತ್ವವಾದಿ ಮಹಾತ್ಮಾ ಗಾಂಧಿಗೆ ಗುಂಡು ಹಾರಿಸಿ ಕೊಂದನು. ಎಲ್ಲ ಹಿಂದುತ್ವವಾದಿಗಳು ಗಾಂಧೀಜಿ ಇನ್ನಿಲ್ಲ ಎಂದು ಭಾವಿಸುತ್ತಾರೆ. ಆದರೆ, ಸತ್ಯ ಇರುವಲ್ಲಿ ಬಾಪು ಇಂದಿಗೂ ಜೀವಂತವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಹಾತ್ಮಾ ಗಾಂಧಿ ಅವರ 74ನೇ ಪುಣ್ಯ ತಿಥಿಯಾದ ರವಿವಾರ ಕಾಂಗ್ರೆಸ್ ರಾಷ್ಟ್ರಪಿತನಿಗೆ ಗೌರವ ನಮನ ಸಲ್ಲಿಸಿತು. ರಾಹುಲ್ ಗಾಂಧಿ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ‘‘ನಾನು ಹತಾಶೆಗೊಂಡಾಗ, ಇತಿಹಾಸದುದ್ದಕ್ಕೂ ಸತ್ಯ ಹಾಗೂ ಪ್ರೀತಿಯ ಮಾರ್ಗ ಯಾವಾಗಲೂ ಗೆದ್ದಿರುವುದನ್ನು ನೆನಪಿಸಿಕೊಳ್ಳುತ್ತೇನೆ. ನಿರುಂಕುಶಾಧಿಕಾರಿಗಳು ಹಾಗೂ ಕೊಲೆಗಡುಕರು ಇರುತ್ತಾರೆ. ಸ್ಪಲ್ಪ ಸಮಯದ ವರೆಗೆ ಅವರು ಅಜೇಯರಾಗಿ ಇರಬಹುದು. ಆದರೆ, ಅಂತಿಮವಾಗಿ ಅವರು ಯಾವಾಗಲೂ ಪತನಗೊಳ್ಳುತ್ತಾರೆ. ಅದರ ಬಗ್ಗೆ ಯಾವಾಗಲೂ ಯೋಚಿಸಿ’’ ಎಂದು ಅವರು ಮಹಾತ್ಮ ಗಾಂಧಿ ಅವರ ಉಲ್ಲೇಖವನ್ನು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮಹಾತ್ಮಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅಲ್ಲದೆ, ಅಹಿಂಸೆ ಕುರಿತು ಮಹಾತ್ಮಾ ಗಾಂಧಿ ಅವರ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ‘‘ಮಹಾತ್ಮಾ ಗಾಂಧಿ ಅವರ ಪುಣ್ಯ ತಿಥಿಯ ದಿನವಾದ ಇಂದು ನಾವು ರಾಷ್ಟ್ರಪಿತನಿಗೆ ಗೌರವ ನಮನ ಸಲ್ಲಿಸುತ್ತೇವೆ. ಇಂದು ಹುತಾತ್ಮರ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಪುರುಷ ಹಾಗೂ ಮಹಿಳೆಯರಿಗೆ ನಾವು ಗೌರವ ನಮನ ಸಲ್ಲಿಸುತ್ತೇವೆ’’. ‘‘ಈ ಕಷ್ಟದ ದಿನಗಳಲ್ಲಿ ಮುನ್ನಡೆಸಲು ಪ್ರೀತಿಯ ಬಾಪು ಇಂದು ನಮ್ಮಾಂದಿಗೆ ಇಲ್ಲ. ಆದರೆ, ಅವರು ನಿರಂಕುಶಾಧಿಕಾರ, ಅಸಮಾನತೆ, ಅನ್ಯಾಯ ಹಾಗೂ ಕಪಟದ ವಿರುದ್ಧ ಭೀತಿ ರಹಿತ ಹಾಗೂ ಪಟ್ಟು ಬಿಡದೆ ಹೋರಾಡಿದ ರೀತಿ ನಮಗೆ ಇಂದಿಗೂ ಮಾರ್ಗದರ್ಶನ’’ ಎಂದಿದೆ. ರಾಷ್ಟ್ರಪಿತನಿಗೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.