ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿ ವಾಹನ, ಮೊಬೈಲ್ ಕಸಿದುಕೊಂಡ ಆರೆಸ್ಸೆಸ್ ಕಾರ್ಯಕರ್ತನ ಬಂಧನ
ಚೆನ್ನೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸದಸ್ಯ ಗಣೇಶ್ ಬಾಬು ಎಂಬಾತನನ್ನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಇಲುಪ್ಪುರ್ ಬಳಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಕಿರುಕುಳ ನೀಡಿದ್ದಕ್ಕಾಗಿ ಶನಿವಾರ ರಾತ್ರಿ ಬಂಧಿಸಲಾಯಿತು. ಕ್ರೈಸ್ತ ಸನ್ಯಾಸಿನಿಯರ ಬಳಿ ಇದ್ದ ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಸಿದುಕೊಂಡಿರುವ ಗಣೇಶ್ ಜತೆ 20ರಿಂದ 30 ಮಂದಿ ಅಪರಿಚಿತರು ಇದ್ದರು ಎಂದು ಇಲುಪ್ಪುರ್ ಪೊಲೀಸರು ತಿಳಿಸಿದ್ದಾಗಿ thenewsminute ವರದಿ ಮಾಡಿದೆ.
ಜನವರಿ 21 ರಂದು ಈ ಘಟನೆ ನಡೆದಿದ್ದು, ಗಣೇಶ್ ನನ್ನು ಶನಿವಾರ ಬಂಧಿಸಿ ರವಿವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಅರಂತಂಗಿ ಉಪ ಕಾರಾಗೃಹದಲ್ಲಿ ಇರಿಸಲಾಗಿದೆ. ಐಪಿಸಿ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 341 (ತಪ್ಪು ತಡೆಗೆ ಶಿಕ್ಷೆ), 294 (ಬಿ) (ಅಶ್ಲೀಲತೆ), 387 (ಸುಲಿಗೆ) ಮತ್ತು ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕ್ರೈಸ್ತ ಸನ್ಯಾಸಿನಿಯರು ಪರಿಚಯಸ್ಥರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಗಣೇಶ್ ಮತ್ತು 20 ರಿಂದ 30 ಇತರರು ಅವರನ್ನು ತಡೆದರು. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದಾರೆಂದು ಆರೋಪಿಸಿ ನನ್ ಗಳ ಬಳಿ ಇದ್ದ ಮೊಬೈಲ್ ಮತ್ತು ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವರ ಆರೋಪ ನಿಜವಲ್ಲ ಎಂದು ಇಲುಪ್ಪುರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ ಗುಂಪು ಆರಂಭದಲ್ಲಿ ಫೋನ್ ಗಳು ಮತ್ತು ದ್ವಿಚಕ್ರ ವಾಹನಗಳನ್ನು ಕಸಿದುಕೊಂಡಿರುವುದನ್ನು ನಿರಾಕರಿಸಿತು. ಆದರೆ ನಂತರ ಗಣೇಶ್ ಮರುದಿನ ಠಾಣೆಯಲ್ಲಿ ಎರಡೂ ವಸ್ತುವನ್ನೂ ತಂದೊಪ್ಪಿಸುವ ಭರವಸೆ ನೀಡಿದ್ದ. ಸತತವಾಗಿ ಹಾಗೆ ಮಾಡಲು ವಿಫಲವಾದ ನಂತರ ಶನಿವಾರ ರಾತ್ರಿ ಗಣೇಶ್ ನನ್ನು ಬಂಧಿಸಲಾಯಿತು ಹಾಗೂ ಆರೋಪ ಹೊರಿಸಲಾಯಿತು ಎಂದು ಪೊಲೀಸರು TNM ಗೆ ತಿಳಿಸಿದರು.