ಪಂಚರಾಜ್ಯ ಚುನಾವಣೆ: ರೋಡ್ಶೋ,ರ್ಯಾಲಿಗಳ ಮೇಲೆ ನಿಷೇಧ ಫೆ.11ರವರೆಗೆ ಮುಂದುವರಿಕೆ

Update: 2022-01-31 18:09 GMT

ಹೊಸದಿಲ್ಲಿ,ಜ.31: ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ರ್ಯಾಲಿಗಳು ಮತ್ತು ರೋಡ್‌ಶೋಗಳ ಮೇಲಿನ ನಿಷೇಧದ ಮುಂದುವರಿಕೆಯ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗವು ಸೋಮವಾರ ಪುನರ್ಪರಿಶೀಲನಾ ಸಭೆಯನ್ನು ನಡೆಸಿತು. ನಿಯೋಜಿತ ತೆರೆದ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಬಹಿರಂಗ ಸಭೆಗಳಿಗೆ ಈಗಿನ 500 ಜನರ ಬದಲಾಗಿ 1,000 ಜನರೊಂದಿಗೆ ಅನುಮತಿಯನ್ನು ನೀಡಲು ಆಯೋಗವು ನಿರ್ಧರಿಸಿತು.

ಫೆ.11ರವರೆಗೆ ರೋಡ್ ಶೋಗಳು,ಪಾದಯಾತ್ರೆಗಳು,ಸೈಕಲ್/ಬೈಕ್ ಅಥವಾ ವಾಹನ ರ್ಯಾಲಿಗಳು ಮತ್ತು ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ ಎಂದು ಆಯೋಗವು ಹೇಳಿದೆ.

ಮನೆ ಮನೆ ಪ್ರಚಾರದಲ್ಲಿ ಭಾಗವಹಿಸುವ ಜನರ ಸಂಖ್ಯೆಯ ಮೇಲಿನ ಮಿತಿಯನ್ನು ಭದ್ರತಾ ಸಿಬ್ಬಂದಿಗಳನ್ನು ಹೊರತುಪಡಿಸಿ ಈಗಿನ 10ರಿಂದ 20ಕ್ಕೆ ಹೆಚ್ಚಿಸಲಾಗಿದೆ.

ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಎಲ್ಲ ಸಂದರ್ಭಗಳಲ್ಲಿ ಕೋವಿಡ್ ಶಿಷ್ಟಾಚಾರಗಳು ಮತ್ತು ಮಾರ್ಗಸೂಚಿಗಳನ್ನು ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿರುವ ಆಯೋಗವು,ಈ ಉದ್ದೇಶಗಳಿಗಾಗಿ ನಿಯೋಜಿತ ಸ್ಥಳಗಳನ್ನು ಮುಂಚಿತವಾಗಿ ಗುರುತಿಸುವ ಮತ್ತು ಅಧಿಸೂಚಿಸುವ ಹೊಣೆಗಾರಿಕೆಯು ಸಂಬಂಧಿಸಿದ ಜಿಲ್ಲಾ ಚುನಾವಣಾಧಿಕಾರಿಗಳದ್ದಾಗಿದೆ. ಜನವರಿ 8ರಂದು ಹೊರಡಿಸಲಾಗಿದ್ದ ಪರಿಷ್ಕೃತ ಮಾರ್ಗಸೂಚಿಯಲ್ಲಿನ ಉಳಿದೆಲ್ಲ ನಿರ್ಬಂಧಗಳು ಮುಂದುವರಿಯುತ್ತವೆ ಎಂದು ಹೇಳಿದೆ.

ಜ.22ರಂದು ನಡೆದಿದ್ದ ತನ್ನ ಹಿಂದಿನ ಸಭೆಯಲ್ಲಿ ಆಯೋಗವು ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ರೋಡ್ಶೋಗಳ ಮೇಲಿನ ನಿಷೇಧವನ್ನು ಜ.31ರವರೆಗೆ ಮುಂದುವರಿಸಿತ್ತು,ಆದರೆ ಮೊದಲ ಎರಡು ಹಂತದ ಮತದಾನಗಳು ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಗರಿಷ್ಠ 500 ಜನರ ಉಪಸ್ಥಿತಿಯೊಂದಿಗೆ ಬಹಿರಂಗ ಸಭೆಗಳಿಗೆ ಅವಕಾಶ ನೀಡಿತ್ತು ಮತ್ತು ಮನೆ ಮನೆ ಪ್ರಚಾರ ನಿಯಮಗಳನ್ನು ಸಡಿಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News