ಗುರುಗ್ರಾಮ ನಮಾಝ್ ವಿವಾದ: ಅಧಿಕಾರಿಗಳ ವಿರುದ್ಧ ನ್ಯಾಯಾಂಗನಿಂದನೆ ಪ್ರಕರಣ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಅಸ್ತು
ಹೊಸದಿಲ್ಲಿ: ಗುರುಗ್ರಾಮದಲ್ಲಿ ಹಿಂದುತ್ವ ಗುಂಪುಗಳು ಶುಕ್ರವಾರದ ನಮಾಜ್‍ಗೆ ಉಂಟು ಮಾಡುತ್ತಿರುವ ಅಡ್ಡಿಗಳಿಗೆ ಸಂಬಂಧಿಸಿದಂತೆ ಹರ್ಯಾಣ ಸರಕಾರದ ಉನ್ನತ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಕೋರಿ ಮಾಜಿ ರಾಜ್ಯಸಭಾ ಸಂಸದ ಮೊಹಮ್ಮದ್ ಹಬೀಬ್ ಅವರು ತಮ್ಮ ವಕೀಲೆ ಇಂದಿರಾ ಜೈಸಿಂಗ್ ಮೂಲಕ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ.
ಹಬೀಬ್ ಪರವಾಗಿ ವಕೀಲೆ ಇಂದಿರಾ ಜೈಸಿಂಗ್ ಅವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠ ಪರಿಗಣಿಸಿದೆ. ಈ ವಿಚಾರವನ್ನು ಪರಿಶೀಲಿಸಿ ಸೂಕ್ತ ಪೀಠದ ಮುಂದೆ ಇರಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ದ್ವೇಷದ ಅಪರಾಧಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಹಲವು ತೀರ್ಪುಗಳನ್ನು ರಾಜ್ಯ ಸರಕಾರಿ ಅಧಿಕಾರಿಗಳು ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಶುಕ್ರವಾರದ ನಮಾಜ್‍ಗೆ ಸಂಬಂಧಿಸಿದಂತೆ ಇಂತಹ ದ್ವೇಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಧರ್ಮದ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷದ ಭಾವನೆ ಮೂಡಿಸಲಾಗುತ್ತಿದೆ ಎಂದು ಅದರಲ್ಲಿ ವಿವರಿಸಲಾಗಿದೆ.
ಹರ್ಯಾಣದ ಮುಖ್ಯ ಕಾರ್ಯದರ್ಶಿ ಸಂಜೀವ್ ಕೌಶಾಲ್ ಮತ್ತು ಡಿಜಿಪಿ ಪಿ ಕೆ ಅಗರ್ವಾಲ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಡಿಸೆಂಬರ್ 3ರಂದು ನಮಾಜ್‍ಗೆ ತೊಂದರೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಜನರನ್ನು ವಶಪಡಿಸಿಕೊಂಡ ಪೊಲೀಸರು ಅದೇ ದಿನ ಅವರನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಅದರಲ್ಲಿ ವಿವರಿಸಲಾಗಿದೆ.
ಇನ್ನೊಂದೆಡೆ ಅದೀಬ್ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಕೆಲ ಹಿಂದು ಕಾರ್ಯಕರ್ತರ ದೂರಿನ ಆಧಾರದಲ್ಲಿ ಹರ್ಯಾಣ ಪೊಲೀಸರು ಅದೀಬ್ ಅವರ ವಿರುದ್ಧವೇ ಪ್ರಕರಣ ದಾಖಲಿಸಿದ್ದರಲ್ಲದೆ ಅವರ ವಿರುದ್ಧ ಮತೀಯ ಸೌಹಾರ್ದತೆಯನ್ನು ಕೆಡಿಸಲು ಮತ್ತು ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು.