ಶಾಹದರ ಅತ್ಯಾಚಾರ ಪ್ರಕರಣ : ಆರೋಪಿಗಳ ವಿರುದ್ಧ ಇನ್ನೊಂದು ಪ್ರಕರಣ ದಾಖಲು
ಹೊಸದಿಲ್ಲಿ: ರಾಜಧಾನಿಯ ಶಾಹದರ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರಗೈದ ಘಟನೆಯ ನಂತರ ನೆರೆಹೊರೆಯವರು ಆಕೆಯನ್ನು ಅಣಕಿಸಿ ಆಕೆಯ ಮೆರವಣಿಗೆ ನಡೆಸಿದ ಪ್ರಕರಣದ ಆರೋಪಿಗಳ ವಿರುದ್ಧ ಇನ್ನೊಂದು ಕಿರುಕುಳ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಸೋದರಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎರಡನೇ ಪ್ರಕರಣ ದಾಖಲಿಸಿದ್ದಾರೆ.
ಈಗಾಗಲೇ ಒಂದೇ ಕುಟುಂಬಕ್ಕೆ ಸೇರಿದ ಒಬ್ಬ ಪುರುಷ, ಎಂಟು ಮಹಿಳೆಯರು ಹಾಗೂ ಮೂರು ಬಾಲಕರನ್ನು ಪೊಲೀಸರು ಪ್ರಕರಣ ಸಂಬಂಧ ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ. ವಿವಾಹಿತಳಾಗಿದ್ದ ಹಾಗೂ ಮಗುವೊಂದರ ತಾಯಿಯೂ ಆಗಿದ್ದ ಯುವತಿಯ ಬೆನ್ನು ಬಿದ್ದಿದ್ದ ಹಾಗೂ ಆಕೆಯನ್ನು ವಿವಾಹವಾಗುವುದಾಗಿ ಹೇಳಿಕೊಂಡಿದ್ದ ಹದಿಹರೆಯದ ಯುವಕನೊಬ್ಬನ ಸಾವಿಗೆ ಆಕೆಯೇ ಕಾರಣ ಎಂದು ದೂರಿ ಆತನ ಕುಟುಂಬ ಈ ಹೇಯ ಕೃತ್ಯ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಡೆಯುವ ಒಂದು ವಾರಕ್ಕೆ ಮುಂಚಿತವಾಗಿ ಸಂತ್ರಸ್ತೆಯ ಸೋದರಿ ಕಿರುಕುಳ ಕುರಿತಂತೆ ದೂರು ನೀಡಿದ್ದಳು, ಆಗ ಯಾವುದೇ ಕ್ರಮಕೈಗೊಳ್ಳದ ಪೊಲೀಸರು ಈಗ ಪ್ರಕರಣ ದಾಖಲಿಸಿದ್ದಾರೆ.
ಜನವರಿ 26ರಂದು ನಡೆದ ಘಟನೆಯಲ್ಲಿ ಆರೋಪಿಗಳು ಯುವತಿಯ ಹಿಡಿದೆಳೆದು ಆಕೆಯ ಕೂದಲು ಕತ್ತರಿಸಿ ನಂತರ ಆಕೆಯ ಮುಖಕ್ಕೆ ಕಪ್ಪು ಬಣ್ಣ ಬಳಿದು ಮೆರವಣಿಗೆ ನಡೆಸಿ ವಿಕೃತಿ ಮೆರೆದಿದ್ದರು.