ಇರಾಕ್ ವಾಯುದಾಳಿಯಲ್ಲಿ 9 ಶಂಕಿತ ಐಸಿಸ್ ಉಗ್ರರ ಹತ್ಯೆ

Update: 2022-01-31 17:23 GMT
ಸಾಂದರ್ಭಿಕ ಚಿತ್ರ:PTI

ಬಗ್ದಾದ್, ಜ.31: ಬಗ್ದಾದ್‌ನ ಉತ್ತರದಲ್ಲಿರುವ ಐಸಿಸಿ ಉಗ್ರರ ನೆಲೆಗಳ ಮೇಲೆ ಇರಾಕ್ ನಡೆಸಿದ ವಾಯುದಾಳಿಯಲ್ಲಿ ಲೆಬನಾನ್‌ನ 4 ಪ್ರಜೆಗಳ ಸಹಿತ ಐಸಿಸ್‌ನ 9 ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಇರಾಕ್ ಅಧಿಕಾರಿಗಳು ಹೇಳಿದ್ದಾರೆ.

ಜನವರಿ 21ರಂದು ಅಲ್ಅಝೀಮ್ ಗುಡ್ಡಗಾಡು ಪ್ರದೇಶದಲ್ಲಿದ್ದ ಇರಾಕ್‌ನ ಸೇನಾಶಿಬಿರಕ್ಕೆ ನುಗ್ಗಿದ್ದ ಐಸಿಸ್ ಉಗ್ರರು, ನಿದ್ರೆಯಲ್ಲಿದ್ದ 11 ಯೋಧರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ವಾಯುಪಡೆಯ ಬೆಂಬಲದೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆ ಯಶಸ್ಸಿಯಾಗಿದೆ. 

ಅಲ್ಅಝೀಮ್ ಗುಡ್ಡಗಾಡು ಪ್ರದೇಶದಲ್ಲಿ ಶಂಕಿತ ಉಗ್ರರ ನೆಲೆಗಳನ್ನು ಗುರುತಿಸಿದ ಬಳಿಕ ಈ ಕಾರ್ಯಾಚರಣೆ ನಡೆದಿದೆ. ಯುದ್ಧವಿಮಾನಗಳು ಉದ್ದೇಶಿತ ಗುರಿಯತ್ತ 3 ದಾಳಿ ನಡೆಸಿದ್ದು 9 ಶಂಕಿತ ಉಗ್ರರು ಹತರಾಗಿದ್ದಾರೆ. ಮೃತರಲ್ಲಿ ಟ್ರಿಪೋಲಿ ನಗರದ ನಿವಾಸಿಗಳಾದ 4 ಲೆಬನಾನ್ ಪ್ರಜೆಗಳೂ ಸೇರಿದ್ದಾರೆ ಎಂದು ಇರಾಕ್ ನ ಸೇನಾಕಾರ್ಯಾಚರಣೆಯ ಮುಖ್ಯಸ್ಥರ ವಕ್ತಾರ ಯೆಹಿಯಾ ರಸೂಲ್‌ರನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಲೆಬನಾನ್ ನ 2ನೇ ಬೃಹತ್ ನಗರವಾದ ಟ್ರಿಪೋಲಿಯಲ್ಲಿ ಹಿಂಸಾಚಾರ ನಿರಂತರವಾಗಿದ್ದು ಇಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆ ಲೆಬನಾನ್ ಸೇನೆಯ ಜತೆ ಸಂಘರ್ಷ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News