ಅಫ್ಘಾನ್: ಹಲವು ಮಾಜಿ ಸರಕಾರಿ ಅಧಿಕಾರಿಗಳನ್ನು ಹತ್ಯೆ ನಡೆಸಿರುವ ತಾಲಿಬಾನ್; ವಿಶ್ವಸಂಸ್ಥೆ ವರದಿ

Update: 2022-01-31 17:48 GMT
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್

ವಾಷಿಂಗ್ಟನ್, ಜ.31: ಅಫ್ಘಾನ್‌ನಿಂದ ಅಮೆರಿಕ ನೇತೃತ್ವದ ವಿದೇಶಿ ಸೇನೆಯ ವಾಪಸಾತಿಯ ಬಳಿಕ ತಾಲಿಬಾನ್ ಹಾಗೂ ಅದರ ಮಿತ್ರಪಡೆಗಳು ಈ ಹಿಂದಿನ ಅಫ್ಘಾನ್ ಸರಕಾರದ ಹಲವು ಸಿಬಂದಿಗಳನ್ನು, ಭದ್ರತಾ ಪಡೆಯ ಸದಸ್ಯರನ್ನು ಹಾಗೂ ಅಂತರಾಷ್ಟ್ರೀಯ ಸೇನಾಪಡೆಯಲ್ಲಿದ್ದ ಯೋಧರನ್ನು ಹತ್ಯೆ ನಡೆಸಿವೆ ಎಂದು ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಅಫ್ಘಾನ್ ಮೇಲೆ ತಾಲಿಬಾನ್‌ಗಳು ನಿಯಂತ್ರಣ ಸಾಧಿಸಿದಂದಿನಿಂದ ಆ ದೇಶದ 39 ಮಿಲಿಯನ್ ಜನತೆಯ ಜೀವನಸ್ಥಿತಿ ಹದಗೆಟ್ಟಿರುವ ಬಗ್ಗೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅಂಕಿಅಂಶ ಸಹಿತ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಮಾಹಿತಿ ನೀಡಿದ್ದಾರೆ. ಆ ದೇಶದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಆದ್ದರಿಂದ ಆ ದೇಶದ ಮಾನವ ಹಕ್ಕು ಸಮಸ್ಯೆಗೆ ಪರಿಹಾರ ರೂಪಿಸಲು ಹೊಸದಾಗಿ ಮಾನವ ಹಕ್ಕುಗಳ ನಿಗಾ ಸಮಿತಿಯನ್ನು ರೂಪಿಸಿ ನೇಮಿಸಬೇಕು ಎಂದವರು ವರದಿಯಲ್ಲಿ ಆಗ್ರಹಿಸಿದ್ದಾರೆ. 

ಕ್ಷಮಾದಾನ ನೀಡುವುದಾಗಿ ತಾಲಿಬಾನ್ ಘೋಷಿಸಿದ್ದರೂ ಈ ಹಿಂದಿನ ಸರಕಾರಿ ಅಧಿಕಾರಿಗಳನ್ನು ಹತ್ಯೆ ಮಾಡುತ್ತಿರುವ, ಬಲವಂತವಾಗಿ ನಾಪತ್ತೆಗೊಳಿಸುವ ಹಾಗೂ ಇತರ ರೀತಿಯ ಮಾನವ ಹಕ್ಕು ಉಲ್ಲಂಘನೆ ಆಗುತ್ತಿರುವ ಬಗ್ಗೆ ವಿಶ್ವಾಸಾರ್ಹ ವರದಿ ನಿರಂತರ ಲಭಿಸುತ್ತಿದೆ. ಆಗಸ್ಟ್ 15ರ ಬಳಿಕ 100ಕ್ಕೂ ಅಧಿಕ ಮಾಜಿ ಸಿಬಂದಿಗಳನ್ನು ತಾಲಿಬಾನ್ ಅಥವಾ ಅದಕ್ಕೆ ಸಂಯೋಜನೆಗೊಂಡಿರುವ ಸಂಘಟನೆ ಹತ್ಯೆ ಮಾಡಿರುವ ವಿಶ್ವಾಸಾರ್ಹ ಮಾಹಿತಿಯಿದೆ. ಜತೆಗೆ ಐಸಿಸ್ ನ ಸ್ಥಳೀಯ ಸಂಘಟನೆಗೆ ಸೇರಿದವರೆಂಬ ಶಂಕೆಯಲ್ಲಿ ಕನಿಷ್ಟ 50 ಮಂದಿಯನ್ನು ವಿಚಾರಣೆಯಿಲ್ಲದೆ ಹತ್ಯೆ ಮಾಡಿದ ಮಾಹಿತಿಯಿದೆ. ಮಾನವ ಹಕ್ಕು ಕಾರ್ಯಕರ್ತರು ಮತ್ತು ಮಾಧ್ಯಮದ ಪ್ರತಿನಿಧಿಗಳು ನಿರಂತರ ದಾಳಿಗೆ, ದೌರ್ಜನ್ಯಕ್ಕೆ, ಬಂಧನಕ್ಕೆ ಒಳಗಾಗುತ್ತಿದ್ದಾರೆ ಅಥವಾ ಹತ್ಯೆ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News