ಅಫ್ಘಾನ್: ಸರಕಾರಿ ವಿಶ್ವವಿದ್ಯಾನಿಲಯಗಳ ಪುನರಾರಂಭಕ್ಕೆ ನಿರ್ಧಾರ

Update: 2022-01-31 18:01 GMT

ಕಾಬೂಲ್, ಜ.31: ಆಗಸ್ಟ್ ನಲ್ಲಿ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದಂದಿನಿಂದ ಮುಚ್ಚಿರುವ ಅಫ್ಘಾನ್ ನ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಫೆಬ್ರವರಿಯಿಂದ ಪುನರಾರಂಭಿಸಲಾಗುವುದು ಎಂದು ಅಫ್ಘಾನ್ ನ ಹಂಗಾಮಿ ಉನ್ನತ ಶಿಕ್ಷಣ ಸಚಿವರು ರವಿವಾರ ಹೇಳಿದ್ದಾರೆ.

ಆದರೆ ಮಹಿಳಾ ವಿದ್ಯಾರ್ಥಿಗಳು ಹಾಜರಾಗಲು ಅವಕಾಶವಿದೆಯೇ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ ಎಂದು ಮೂಲಗಳು ಹೇಳಿವೆ.

ಚಳಿ ಹೆಚ್ಚಿರದ ಪ್ರಾಂತಗಳಲ್ಲಿನ ವಿವಿಗಳನ್ನು ಫೆಬ್ರವರಿ 2ರಿಂದ ಮತ್ತೆ ಆರಂಭಿಸಲಾಗುವುದು. ಚಳಿ ಹೆಚ್ಚಿರುವ ಪ್ರದೇಶದ ವಿವಿಗಳನ್ನು ಫೆಬ್ರವರಿ 26ರಿಂದ ಆರಂಭಿಸಲಾಗುವುದು ಎಂದು ಸಚಿವ ಶೇಖ್ ಅಬ್ದುಲ್ ಬಾಖಿ ಹಖ್ಖಾನಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಆದರೆ ಮಹಿಳಾ ವಿದ್ಯಾರ್ಥಿಗಳಿಗೆ ಮಾಡಿರುವ ವ್ಯವಸ್ಥೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ವ್ಯವಸ್ಥೆ ಮಾಡಬಹುದು ಎಂದು ಈ ಹಿಂದೆ ತಾಲಿಬಾನ್ ಮುಖಂಡರು ಹೇಳಿಕೆ ನೀಡಿದ್ದರು.

ಇದುವರೆಗೆ ಅಫ್ಘಾನ್ನ ಬಹುತೇಕ ಪ್ರಾಂತಗಳಲ್ಲಿ ಬಾಲಕರಿಗೆ ಮಾತ್ರ  ಹೈಸ್ಕೂಲ್‌ವರೆಗಿನ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಕೆಲವು ಖಾಸಗಿ ವಿವಿಗಳೂ ತೆರೆದಿದ್ದರೂ, ಹಲವು ಕಾರಣಗಳಿಂದ ಮಹಿಳಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿಲ್ಲ ಎಂದು ಮಾಧ್ಯಮಗೂ ವರದಿ ಮಾಡಿವೆ. ದೇಶಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಅಫ್ಘಾನ್ ಸರಕಾರ ವಿದೇಶದಿಂದ ಇನ್ನಷ್ಟು ನೆರವನ್ನು ಎದುರು ನೋಡುತ್ತಿದೆ. ಆದರೆ ಮಹಿಳಾ ವಿದ್ಯಾರ್ಥಿಗಳಿಗೂ ಶಿಕ್ಷಣ ಪಡೆಯುವ ಹಕ್ಕು ಲಭಿಸಬೇಕು ಎಂಬುದು ಪಾಶ್ಚಿಮಾತ್ಯ ದೇಶಗಳು ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News