ಚೀನಾ ವಶದಲ್ಲಿದ್ದಾಗ ನನ್ನ ಮಗನಿಗೆ ವಿದ್ಯುತ್ ಶಾಕ್ ನೀಡಲಾಗಿದೆ: ಅರುಣಾಚಲ ಪ್ರದೇಶದ ಬಾಲಕನ ತಂದೆ ಆರೋಪ

Update: 2022-02-01 07:58 GMT
Photo: Twitter

ಇಟಾನಗರ: ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯಿಂದ ಅಪಹರಣಕ್ಕೊಳಗಾಗಿದ್ದ ಭಾರತದ ಬಾಲಕ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಇಡೀ ಘಟನೆಯು ನನ್ನ ಮಗನನ್ನು  ಭಯಭೀತನನ್ನಾಗಿ ಮಾಡಿದ್ದು, ಆತ ಮಾನಸಿಕವಾಗಿ ದಣಿದಿದ್ದಾನೆ ಎಂದು ಬಾಲಕ ಮಿರಾಮ್ ತಂದೆ ಒಪಾಂಗ್ ತರೋನ್ ಹೇಳಿದ್ದಾರೆ.

ಒಂದು ವಾರಕ್ಕೂ ಹೆಚ್ಚು ಕಾಲ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ವಶದಲ್ಲಿದ್ದಾಗ ಅವನನ್ನು ಕಟ್ಟಿಹಾಕಿ ಕಣ್ಣು ಮುಚ್ಚಲಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ.

"ನನ್ನ ಮಗ ಇನ್ನೂ ಆಘಾತದಲ್ಲಿಯೇ ಇದ್ದಾನೆ. ಅವನ ಬೆನ್ನಿಗೆ ಒದೆಯಲಾಗಿತ್ತು ಹಾಗೂ  ಆರಂಭದಲ್ಲಿ ಲಘುವಾದ ವಿದ್ಯುತ್ ಶಾಕ್ ಅನ್ನು ನೀಡಲಾಯಿತು. ಅವನನ್ನು ಹೆಚ್ಚಿನ ಸಮಯ ಕಣ್ಣುಮುಚ್ಚಿ ಇರಿಸಲಾಗಿತ್ತು ಹಾಗೂ  ಸೆರೆಯಲ್ಲಿದ್ದಾಗ ಅವನ ಕೈಗಳನ್ನು ಕಟ್ಟಲಾಗಿತ್ತು. ಅವರು ತಿನ್ನುವ ಅಥವಾ ವಿಶ್ರಾಂತಿ ಪಡೆಯುವ ಸಮಯ ಬಂದಾಗ ಮಾತ್ರ ಕೈಗಳನ್ನು ಬಿಡಿಸುತ್ತಿದ್ದರು. ಆದರೆ, ಅವರು ಅವನಿಗೆ ಸಾಕಷ್ಟು ಆಹಾರವನ್ನು ಒದಗಿಸಿದ್ದರು”ಎಂದು ಒಪಾಂಗ್ ತರೋನ್ ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರ ಸಂಜೆ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸೇನೆಯು ಅಪಹರಿಸಲ್ಪಟ್ಟಿದ್ದ ಮಿರಾಮ್ ತರೋನ್ ನನ್ನು ಅವರ ಪೋಷಕರೊಂದಿಗೆ ಮತ್ತೆ ಸೇರಿಸಿದೆ ಎಂದು ಜಿಲ್ಲಾ ಉಪ ಆಯುಕ್ತ ಶಾಶ್ವತ್ ಸೌರಭ್ ತಿಳಿಸಿದ್ದಾರೆ.

17ರ ವಯಸ್ಸಿನ ಮಿರಾಮ್ ಜನವರಿ 18 ರಂದು ತನ್ನ ಸ್ನೇಹಿತ ಜಾನಿ ಯಾಯಿಂಗ್ ಅವರೊಂದಿಗೆ ಬೇಟೆಯಾಡಲು ಹೋದಾಗ ವಾಸ್ತವ ನಿಯಂತ್ರಣ ರೇಖೆಯ ಬಳಿಯ ಲುಂಗ್ಟಾ ಜೋರ್ ಪ್ರದೇಶದಿಂದ ಚೀನಾದ ಸೇನೆಯು ಅಪಹರಿಸಿತ್ತು. ಯಾಯಿಂಗ್ ಅವರು ಸ್ಥಳದಿಂದ ತಪ್ಪಿಸಿಕೊಂಡು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News