×
Ad

ಕ್ರಿಪ್ಟೋ ಟ್ಯಾಕ್ಸ್?: ಡಿಜಿಟಲ್ ಸ್ವತ್ತುಗಳ ಆದಾಯದ ಮೇಲೆ ಶೇ 30ರಷ್ಟು ತೆರಿಗೆ ಘೋಷಿಸಿದ ವಿತ್ತ ಸಚಿವೆ

Update: 2022-02-01 15:03 IST

 ಹೊಸದಿಲ್ಲಿ: ಇಂದು ಕೇಂದ್ರ ಬಜೆಟ್ ಮಂಡಿಸುವ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸರಕಾರ  ಡಿಜಿಟಲ್ ಸ್ವತ್ತುಗಳಿಂದ ದೊರಕುವ ಆದಾಯದ ಮೇಲೆ ಶೇ 30ರಷ್ಟು ತೆರಿಗೆ ವಿಧಿಸಲಿದೆ ಎಂದು ಹೇಳಿದ್ದಾರೆ. ಇದು ದೇಶದಲ್ಲಿಯೇ ಗರಿಷ್ಠ ತೆರಿಗೆ ದರವಾಗಿದೆ.

ಕ್ರಿಪ್ಟೋಕರೆನ್ಸಿಗಳನ್ನು ಸರಕಾರ ಅನುಮತಿಸಲಿದೆಯೇ, ಅನುಮತಿಸಿದ್ದೇ ಆದಲ್ಲಿ ಹೇಗೆ ಅನುಮತಿಸಲಿದೆ ಎಂಬ ಕುರಿತು ಸರಕಾರ ಇನ್ನಷ್ಟೇ ಸ್ಪಷ್ಟಪಡಿಸಬೇಕಿದ್ದರೂ  ಕ್ರಿಪ್ಟೋಕರೆನ್ಸಿಗಳನ್ನು ಡಿಜಿಟಲ್ ಸ್ವತ್ತುಗಳೆಂದು ಸರಕಾರ ಪರಿಗಣಿಸಲಿದೆ ಎಂದೇ ನಂಬಲಾಗಿದೆ.

ಹೀಗಿರುವಾಗ ಇಂದು ಶೇ 30ರಷ್ಟು ತೆರಿಗೆಯನ್ನು ಡಿಜಿಟಲ್ ಸ್ವತ್ತುಗಳ ಮೇಲಿನ ಆದಾಯಕ್ಕೆ ಘೋಷಿಸಿದ ಸರಕಾರ ಈ ತೆರಿಗೆಯನ್ನು ಕ್ರಿಪ್ಟೋಕರೆನ್ಸಿಗಳಿಗೆ ಅನುಮತಿಸಿದ ನಂತರ ವಿಧಿಸಲಿದೆ ಎಂದೇ ನಂಬಲಾಗಿದೆ.

ಆರಂಭದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಸರಕಾರ ನಿಷೇಧಿಸಲಿದೆ ಎಂದೇ ತಿಳಿಯಲಾಗಿತ್ತಾದರೂ ಅದರ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ಸರಕಾರ ರೂಪಿಸಲಿದೆ ಎನ್ನಲಾಗಿದೆ.

ದೇಶದಲ್ಲಿ ಅಂದಾಜು 1.5 ಕೋಟಿಯಿಂದ 2 ಕೋಟಿ ಕ್ರಿಪ್ಟೋಕರೆನ್ಸಿ ಹೂಡಿಕೆದಾರರಿದ್ದಾರೆಂದು  ತಿಳಿಯಲಾಗಿದ್ದು ಅವರ ಬಳಿಯ ಒಟ್ಟು ಕ್ರಿಪ್ಟೋಕರೆನ್ಸಿ ಮೌಲ್ಯ ಸುಮಾರು ರೂ 40,000 ಕೋಟಿ ಎಂದು ಅಂದಾಜಿಸಲಾಗಿದೆ.

ಈ ವರ್ಷ ಸರಕಾರವು ಬ್ಲಾಕ್ ಚೈನ್ ಟೆಕ್ನಾಲಜಿ ಆಧರಿತ ಡಿಜಿಟಲ್ ರೂಪಾಯಿಯನ್ನು ಪರಿಚಯಿಸಲಿದೆ ಎಂದು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

"ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಚಯಿಸುವುದರಿಂದ ಡಿಜಿಟಲ್ ಆರ್ಥಿಕತೆಗೆ ದೊಡ್ಡ ಉತ್ತೇಜನ ದೊರೆಯಲಿದೆ" ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News