×
Ad

ಸರಕಾರದ ʼಒನ್ ಕ್ಲಾಸ್, ಒನ್ ಚಾನಲ್ʼ ಯೋಜನೆಗೆ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ

Update: 2022-02-01 15:56 IST

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಸಂದರ್ಭದ ಲಾಕ್ ಡೌನ್ ಗಳ ವೇಳೆ ಶಾಲೆಗಳನ್ನು ಮುಚ್ಚಿದ್ದರಿಂದ  ಉಂಟಾಗಿರುವ ಕಲಿಕಾ ನಷ್ಟವನ್ನು ಸರಿದೂಗಿಸಲೆಂದು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಘೋಷಿಸಿರುವ ʼಒನ್ ಕ್ಲಾಸ್, ಒನ್ ಚಾನಲ್ʼ ಯೋಜನೆಗೆ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರತಿ ತರಗತಿಗೆಂದು ಒಂದು ಚಾನೆಲ್  ಆರಂಭಿಸಲಾಗುವುದು. ಪೂರಕ ಕಲಿಕೆಗೆ ಅವಕಾಶವೊದಗಿಸುವ ಚಾನಲ್ ಗಳ ಸಂಖ್ಯೆಯನ್ನು 12ರಿಂದ 200ಕ್ಕೆ ಏರಿಕೆ ಮಾಡಲಾಗುವುದು, ಈ ಚಾನೆಲ್ ಗಳ ಮೂಲಕ ಪ್ರಾದೇಶಿಕ ಮತ್ತು ಆಯಾಯ ರಾಜ್ಯಗಳ ಪಠ್ಯಕ್ರಮ ಆಧರಿತ ಶಿಕ್ಷಣ ಒದಗಿಸಲಾಗುವುದು, ಎಂದು ಸಚಿವೆ ಹೇಳಿದ್ದಾರೆ.

ಆದರೆ ಸರಕಾರದ ಈ ಪ್ರಸ್ತಾವನೆಯನ್ನು ಕೆಲ ತಜ್ಞರು ಸ್ವಾಗತಿಸಿದ್ದಾರಾದರೂ ಇನ್ನು ಕೆಲವರು ಟೀಕಿಸಿದ್ದಾರೆ. ಖ್ಯಾತ ಸಾಂಕ್ರಾಮಿಕ ರೋಗಗಳ ತಜ್ಞ  ಹಾಗೂ ದಿಲ್ಲಿಯಲ್ಲಿ ಶಾಲೆಗಳನ್ನು ಪುನರಾರಂಭಿಸಬೇಕೆಂದು ಸರಕಾರದ ಮೇಲೆ ಒತ್ತಡ ಹೇರಿದ್ದ ಪೋಷಕರ ಸಂಘದ ಭಾಗವಾಗಿರುವ ಡಾ ಚಂದ್ರಕಾಂತ್ ಲಹರಿಯಾ ಪ್ರತಿಕ್ರಿಯಿಸಿ, "ಟಿವಿ ಚಾನಲ್ ಆಧರಿತ ಶಿಕ್ಷಣವು  ಕಲಿಕಾ ನಷ್ಟಕ್ಕೆ ಪರಿಹಾರವಲ್ಲ, ನಮ್ಮ ಮಕ್ಕಳು ಎದುರಿಸಿದ ಕಲಿಕಾ ನಷ್ಟದ ಬಗ್ಗೆ ನಾವು ಗಂಭೀರವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ರೀತಿ ಹೂಡಿಕೆ ಮಾಡುವುದಕ್ಕಿಂತ ಶಾಲಾ ಶಿಕ್ಷಣದಲ್ಲಿ ಹೂಡಿಕೆ ಮಾಡಿ" ಎಂದು ಟ್ವೀಟ್ ಮಾಡಿದ್ದಾರೆ.

ಮಕ್ಕಳು ಎದುರಿಸಿದ ಕಲಿಕಾ ನಷ್ಟಗಳಿಗೆ ಹೋಲಿಸಿದಾಗ ಸರಕಾರದ ಕ್ರಮ ಅತ್ಯಲ್ಪ ಎಂದು ಐಐಎಂ ಅಹ್ಮದಾಬಾದ್ ಇಲ್ಲಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ತರುಣ್ ಜೈನ್ ಹೇಳಿದರೆ, ಐಸಿಸಿಆರ್ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಪ್ರತಿಕ್ರಿಯಿಸಿ ಇದೊಂದು ವಿನೂತನ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News