ಒಮೈಕ್ರಾನ್ ನ ಉಪರೂಪಾಂತರ ಸೋಂಕು 57 ದೇಶಗಳಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

Update: 2022-02-02 18:01 GMT

ಜಿನೆವಾ, ಫೆ.2: ಹೆಚ್ಚು ಸಾಂಕ್ರಾಮಿಕವಾದ ಕೊರೋನ ವೈರಸ್‌ನ ಪ್ರಭೇದ ಒಮೈಕ್ರಾನ್ ಸೋಂಕಿನ ಉಪರೂಪಾಂತರ ಬಿಎ.2 ಈಗ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಮೈಕ್ರಾನ್ ಹಾಗೂ ಉಪರೂಪಾಂತರ ಬಿಎ.2 ಸೋಂಕಿನ ನಡುವಿನ ವ್ಯತ್ಯಾಸದ ಬಗ್ಗೆ ಈಗಿನ್ನೂ ಹೆಚ್ಚು ತಿಳಿದುಬಂದಿಲ್ಲ.

 ಆದರೆ, ಕೆಲವು ದೇಶಗಳಲ್ಲಿ ದೃಢಪಟ್ಟ ಒಮೈಕ್ರಾನ್ ಸೋಂಕು ಪ್ರಕರಣಗಳಲ್ಲಿ ರಹಸ್ಯ ಸೋಂಕು ಎಂದೇ ಕರೆಯಲಾಗುವ ಬಿಎ.2 ಸೋಂಕಿನ ಪ್ರಮಾಣ 50%ಕ್ಕೂ ಅಧಿಕವಾಗಿದೆ ಮತ್ತು ಇದು ಒಮೈಕ್ರಾನ್‌ಗಿಂತ ಅಧಿಕ ಸಾಂಕ್ರಾಮಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಸಾಪ್ತಾಹಿಕ ಅಂಕಿಅಂಶ ವರದಿಯಲ್ಲಿ ಉಲ್ಲೇಖಿಸಿದೆ. ಒಮೈಕ್ರಾನ್ ರೂಪಾಂತರದ ಪ್ರಥಮ ಆವೃತ್ತಿಯಾದ ಬಿಎ.1ಗಿಂತ ಬಿಎ.2 ರೂಪಾಂತರ ಹೆಚ್ಚು ವೇಗದಲ್ಲಿ ಪ್ರಸಾರಗೊಳ್ಳುತ್ತಿರುವುದು ಆರಂಭಿಕ ಅಂಕಿಅಂಶಗಳಿಂದ ಸಾಬೀತಾಗಿದೆ . 

ಆದರೆ ಈ ಉಪರೂಪಾಂತರವೂ ಹೆಚ್ಚಿನ ತೀವ್ರತೆ ಹೊಂದಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕೊರೋನ ಸೋಂಕು ವಿಷಯಕ್ಕೆ ಸಂಬಂಧಿಸಿದ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮರಿಯಾ ವ್ಯಾನ್ ಕೆರ್ಖೋವ್ ಸುದ್ಧಿಗಾರರಿಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News