ನೀವು ಸಂಸದರಿಗೆ ಮಾತನಾಡಲು ಅನುಮತಿ ನೀಡುವಂತಿಲ್ಲ, ಅದು ನನ್ನ ಹಕ್ಕು: ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ತರಾಟೆ

Update: 2022-02-03 07:33 GMT

ಹೊಸದಿಲ್ಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸರಿಯಾದ ಸಂಸದೀಯ ಕಾರ್ಯವಿಧಾನವನ್ನು ಅನುಸರಿಸದಿದ್ದಕ್ಕಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಬ್ಬ ಸಂಸದರಿಗೆ ಮಾತನಾಡಲು ರಾಹುಲ್ ಗಾಂಧಿ "ಅನುಮತಿ" ನೀಡಿರುವುದನ್ನು ಸ್ಪೀಕರ್ ಪ್ರಶ್ನಿಸಿದ್ದಾರೆ. "ಈ ಅನುಮತಿ ನೀಡಲು ನೀವು ಯಾರು? ನೀವು ಅನುಮತಿ ನೀಡಲು ಸಾಧ್ಯವಿಲ್ಲ, ಅದು ನನ್ನ ಹಕ್ಕು, ಯಾರಿಗೂ ಅವಕಾಶ ನೀಡುವ ಹಕ್ಕು ಇಲ್ಲ, ಸ್ಪೀಕರ್‌ಗೆ ಮಾತ್ರ ಅವಕಾಶ ನೀಡುವ ಹಕ್ಕಿದೆ" ಎಂದು  ಓಂ ಬಿರ್ಲಾ ಹೇಳಿದ್ದಾರೆ. 

'ನಾನು ಪ್ರಜಾಸತ್ತಾತ್ಮಕ ವ್ಯಕ್ತಿ ಮತ್ತು ನಾನು ಇನ್ನೊಬ್ಬ ವ್ಯಕ್ತಿಗೆ ಮಾತನಾಡಲು ಅವಕಾಶ ನೀಡುತ್ತೇನೆʼ ಎಂದು ರಾಹುಲ್‌ ಗಾಂಧಿ ಹೇಳಿದ್ದಕ್ಕೆ, ಅದು ನನ್ನ ಹಕ್ಕು, ಸ್ಪೀಕರ್‌ಗೆ ಮಾತ್ರ ಮಾತನಾಡಲು ಅವಕಾಶ ನೀಡುವ ಹಕ್ಕಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್ ಅವರ ಹೆಸರನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ,  ದಲಿತರಾಗಿರುವ ಪಾಸ್ವಾನ್‌  ತಪ್ಪು ಪಕ್ಷದಲ್ಲಿದ್ದಾರೆ ಎಂದು ಹೇಳಿದ್ದಾರೆ.

"ನೀವು ಯಾರ ಮಾತನ್ನೂ ಕೇಳುವುದಿಲ್ಲ, ಬಿಜೆಪಿಯಲ್ಲಿರುವ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರ ಮಾತನ್ನೂ ಕೇಳುವುದಿಲ್ಲ. ಇಂದು ನನ್ನ ದಲಿತ ಸಹೋದ್ಯೋಗಿ ಪಾಸ್ವಾನ್‌ ಜಿ ಮಾತನಾಡುವುದನ್ನು ನಾನು ನೋಡಿದ್ದೇನೆ, ಅವರಿಗೆ ದಲಿತರ ಇತಿಹಾಸ ತಿಳಿದಿದೆ, 3,000 ವರ್ಷಗಳಿಂದ ದಲಿತರನ್ನು ಯಾರು ದಬ್ಬಾಳಿಕೆ ಮಾಡಿದ್ದಾರೆಂದು ಅವರಿಗೆ ತಿಳಿದಿದೆ. ಆದರೆ ಅವರು ಸಂಕೋಚದಿಂದ ಮಾತನಾಡುತ್ತಿದ್ದಾರೆ. ನನಗೆ ಅವರ ಬಗ್ಗೆ ಹೆಮ್ಮೆ ಇದೆ. ಈ ಸಜ್ಜನರ ಬಗ್ಗೆ ನನಗೆ ಹೆಮ್ಮೆ ಇದೆ. ಅವರ ಮನದಾಳದಲ್ಲಿರುವುದನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಅವರು ತಪ್ಪು ಪಕ್ಷದಲ್ಲಿದ್ದಾರೆ ಚಿಂತಿಸಬೇಡಿ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಹುಲ್‌ ಗಾಂಧಿ ಮಾತುಗಳಿಗೆ ಸಂಸತ್ತಿನಲ್ಲಿ ಗದ್ದಲ ಉಂಟಾಗಿದೆ. ಈ ನಡುವೆ ಮಾತನಾಡಲು ಎದ್ದು ನಿಂತ ಪಾಸ್ವಾನ್ ಅವರಿಗೆ ಸ್ಪೀಕರ್‌ ಮತ್ತೆ ಮಾತನಾಡುವಂತೆ ಸೂಚಿಸಿದ್ದಾರೆ. ತಕ್ಷಣವೇ  ಪಾಸ್ವಾನ್ ಅವರಿಗೆ ಸನ್ನೆ ಮಾಡಿದ ರಾಹುಲ್‌ ಗಾಂಧಿ ಮಾತನಾಡುವಂತೆ ಸೂಚಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳಿದೆ. 

ಇದರಿಂದ ಆಕ್ರೋಶಗೊಂಡ ಸ್ಪೀಕರ್ “ನೀವು ಯಾರಿಗೂ ಅನುಮತಿ ನೀಡುವಂತಿಲ್ಲ, ಇದು ನನ್ನ ಹಕ್ಕು" ಎಂದು ರಾಹುಲ್‌ ಗಾಂಧಿಯನ್ನು ತರಾಟೆಗೆ ತೆಗೆದಿದ್ದಾರೆ.

ಇದನ್ನೂ ಓದಿ: ನೋವು ಏನೆಂದು ಗೊತ್ತಿದೆ, ನನ್ನ ತಂದೆಯೂ ಕೊಲೆಯಾಗಿದ್ದರು: ರಾಹುಲ್ ಗಾಂಧಿಗೆ ಬಿಜೆಪಿ ಸಂಸದರ ಉತ್ತರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News