×
Ad

ʼಆಯ್ಕೆಗಾರರಿಗೆ ಒತ್ತಡ ಹಾಕುತ್ತಾರೆʼ ಎಂಬ ಆರೋಪದ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದೇನು?

Update: 2022-02-04 19:58 IST

ಹೊಸದಿಲ್ಲಿ, ಫೆ.4: ಬಿಸಿಸಿಐ ಅಧ್ಯಕ್ಷರಾಗಿ ಕಳೆದ 26 ತಿಂಗಳಲ್ಲಿ ಆಯ್ಕೆಗಾರರ ಮೇಲೆ ಪ್ರಭಾವ ಬೀರುತ್ತಾರೆಂಬ ಆರೋಪದಿಂದ ತೊಡಗಿ ತನ್ನ ಅವಧಿಯಲ್ಲಿ ಮಹಿಳಾ ಕ್ರಿಕೆಟ್‌ಗೆ ಸಾಕಷ್ಟು ಕೆಲಸ ಮಾಡಿಲ್ಲ ಎನ್ನುವ ಟೀಕೆಯ ತನಕ ಎಲ್ಲದಕ್ಕೂ ಮಾಜಿ ನಾಯಕ ಸೌರವ್ ಗಂಗುಲಿ ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.

ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ನಿರಾಕರಿಸುವ ಜೊತೆಗೆ ಬಿಸಿಸಿಐ ಅಧ್ಯಕ್ಷನಾಗುವ ಮೊದಲು ತಾನು ಭಾರತೀಯ ಕ್ರಿಕೆಟಿಗನಾಗಿ 113 ಟೆಸ್ಟ್ ಪಂದ್ಯಗಳ ಸಹಿತ ಒಟ್ಟು 424 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಚಾರವನ್ನು ಟೀಕಾಕಾರರಿಗೆ ನೆನಪಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವ ಅವಧಿ ಅಂತ್ಯವಾಗಿರುವ ವಿಚಾರ, ಇತ್ತೀಚೆಗೆ ಎರಡು ಹಂತಗಳಲ್ಲಿ ಆರಂಭವಾಗಲಿದೆ ಎಂದು ಪ್ರಕಟಿಸಲಾಗಿರುವ ರಣಜಿ ಟ್ರೋಫಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಗಂಗುಲಿ ಸ್ಪಷ್ಟನೆ ನೀಡಿದರು.

ಕೋಲ್ಕತಾದಲ್ಲಿ ಈ ತಿಂಗಳು ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯು ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂ ಎದುರು ನಡೆಯಲಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ ಗಂಗುಲಿ, ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಭಿನ್ನಾಭಿಪ್ರಾಯ ಕುರಿತು ಕೇಳಿದಾಗ ನಕ್ಕು ಸುಮ್ಮ ನಾದರು.

 ನೀವು ಆಯ್ಕೆ ಸಮಿತಿಯ ಮೇಲೆ ಪ್ರಭಾವ ಬೀರುತ್ತೀರಿ ಹಾಗೂ ಸಭೆಗಳಲ್ಲಿ ಭಾಗವಹಿಸಿ ಆಯ್ಕೆಗಾರರ ಮೇಲೆ ಒತ್ತಡ ಹೇರುತ್ತೀರಿ ಎಂಬ ಆರೋಪ ಕೇಳಿ ಬಂದಿದೆಯಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗುಲಿ, "ಈ ಕುರಿತು ಯಾರಿಗೂ ಏನನ್ನೂ ಉತ್ತರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಇಂತಹ ಆಧಾರರಹಿತ ಆರೋಪಕ್ಕೆ ಬೆಲೆ ಕೊಡುವ ಅಗತ್ಯವೂ ಇಲ್ಲ. ನಾನು ಬಿಸಿಸಿಐ ಅಧ್ಯಕ್ಷ. ಬಿಸಿಸಿಐ ಅಧ್ಯಕ್ಷರು ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ಆಯ್ಕೆ ಸಮಿತಿಯ ಸಭೆಯಲ್ಲಿ ನಾನು ಕುಳಿತುಕೊಂಡಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದನ್ನು ನಾನು ನೋಡಿದ್ದೇನೆ. ಕಾರ್ಯದರ್ಶಿ ಜಯ್ ಶಾ, ನಾಯಕ ವಿರಾಟ್ ಕೊಹ್ಲಿ ಹಾಗೂ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರೊಂದಿಗೆ ಕುಳಿತುಕೊಂಡಿರುವ ಚಿತ್ರವು ಆಯ್ಕೆ ಸಮಿತಿಯ ಸಭೆಗೆ ಸಂಬಂಧಿಸಿದ್ದಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುವೆ. ಜಯೇಶ್ ಆಯ್ಕೆ ಸಮಿತಿಯ ಸಭೆಯ ಭಾಗವಾಗಿಲ್ಲ. ನಾನು ಭಾರತಕ್ಕಾಗಿ 424 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ಜನರಿಗೆ ಈ ಬಗ್ಗೆ ನೆನಪಿಸುವುದು ಕೆಟ್ಟ ಆಲೋಚನೆಯಾಗದು'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News