ಈ ಬಾರಿಯ ಬಜೆಟ್ ಡಿಜಿಟಲೀಕರಣ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೊಸತನಕ್ಕೆ ಒತ್ತು ನೀಡಿದೆ: ಐಎಂಎಫ್

Update: 2022-02-04 17:28 GMT

ವಾಷಿಂಗ್ಟನ್, ಫೆ.4: ಭಾರತದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಭಾರತಕ್ಕೆ ಅತ್ಯಂತ ಚಿಂತನಶೀಲ ಕಾರ್ಯಸೂಚಿಯಾಗಿದ್ದು ಮಾನವ ಬಂಡವಾಳ ಹೂಡಿಕೆ ಮತ್ತು ಡಿಜಿಟಲೀಕರಣ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ತಲಿನಾ ಜಾರ್ಜಿಯೆವಾ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ 39.45 ಲಕ್ಷ ಕೋಟಿ ಮೊತ್ತದ ಬಜೆಟ್ನಲ್ಲಿ ಕೊರೋನ ಸಾಂಕ್ರಾಮಿಕದಿಂದ ತತ್ತರಿಸಿರುವ ಆರ್ಥಿಕತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಸಲು ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗಿದೆ. ಭಾರತದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ನಾವು ಅಂದಾಜಿಸಿದ್ದೇವೆ. 2022ರಲ್ಲಿ ಬೆಳವಣಿಗೆ ದರ ನಾವು ಈ ಹಿಂದೆ ಅಂದಾಜಿಸಿದ್ದ 9.5%ಕ್ಕಿಂತ ತುಸು ಕಡಿಮೆಯಾಗಿದ್ದರೂ(9%) 2023ರಲ್ಲಿ ಸ್ವಲ್ಪ ಮುನ್ನಡೆಯನ್ನು ಅಂದಾಜಿಸಿದ್ದೇವೆ. 

ಸ್ಥಿರಬೆಳವಣಿಗೆಯ ಕುರಿತು ಭಾರತದ ವಿತ್ತಸಚಿವೆಯ ಹೇಳಿಕೆ ಮತ್ತು ನಮ್ಮ ಅಂದಾಜಿನಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂದು ಕ್ರಿಸ್ತಲಿನಾ ಹೇಳಿದ್ದಾರೆ. ಗುರುವಾರ ವರ್ಚುವಲ್ ವೇದಿಕೆಯ ಮೂಲಕ ಸುದ್ಧಿಗಾರರ ಜತೆ ಅವರು ಮಾತನಾಡಿದರು. ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲೂ ಭಾರತ ಉತ್ತಮ ಕಾರ್ಯನಿರ್ವಹಣೆಯನ್ನು ಮುಂದುವರಿಸಿದೆ ಮತ್ತು ಕೊರೋನ ಸಾಂಕ್ರಾಮಿಕದ ಸಮಸ್ಯೆ ಮುಂದುವರಿದರೂ, ಆರ್ಥಿಕ ಚಟುವಟಿಕೆಯ ಮೇಲೆ ಯಾವುದೇ ಗಮನಾರ್ಹ ಆಘಾತ ನೀಡದ ರೀತಿಯಲ್ಲಿ ಅವರು ನಿರ್ಬಂಧ ಜಾರಿಗೊಳಿಸಬಹುದು ಎಂಬ ನಿರೀಕ್ಷೆ ನಮ್ಮದಾಗಿದೆ. 

ಇದುವರೆಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಆರ್ಥಿಕ ಪರಿಸ್ಥಿತಿಯನ್ನು ಬಿಗಿಗೊಳಿಸಿರುವುದು ಅಭಿವೃದ್ಧಿಶೀಲ ದೇಶದ ಮಾರುಕಟ್ಟೆಯ ಮೇಲೆ ಹೆಚ್ಚಿನ ಸಮಸ್ಯೆಗೆ ಕಾರಣವಾಗಿಲ್ಲ. ಈ ಹಿಂದಿನ ಅವಧಿಗೆ ಹೋಲಿಸಿದರೆ, ಆರ್ಥಿಕ ಬೆಳವಣಿಗೆ ದರದ ಮೇಲಿನ ಪರಿಣಾಮವೂ ಗಮನಾರ್ಹವಾಗಿಲ್ಲ. ಯಾಕೆಂದರೆ, ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳು ಆಘಾತದಿಂದ ರಕ್ಷಣೆ ಪಡೆಯಲು ರಕ್ಷಾಕವಚ ರೂಪಿಸಿಕೊಂಡಿದ್ದವು ಮತ್ತು ಒಮ್ಮೆ ಹಣದುಬ್ಬರದ ಒತ್ತಡಕ್ಕೆ ಒಳಗಾದೊಡನೆ ಹಲವು ದೇಶಗಳು ತಕ್ಷಣ ವಿವೇಕಯುತ ಕ್ರಮಗಳನ್ನು ಅನುಸರಿಸಿದವು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News