ರಶ್ಯಾ-ಉಕ್ರೇನ್ ವಿವಾದವು ಭಾರತದೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗದು: ಅಮೆರಿಕ
ನ್ಯೂಯಾರ್ಕ್, ಫೆ.4: ಅಮೆರಿಕ- ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ತನ್ನದೇ ಆದ ಮಾನದಂಡವಿದೆ . ರಶ್ಯಾಕ್ಕೆ ಸಂಬಂಧಿಸಿದ ಉದ್ವಿಗ್ನತೆಯು ಈ ದ್ವಿಪಕ್ಷೀಯ ಸಂಬಂಧಧ ಮೇಲೆ ಯಾವುದೇ ಪರಿಣಾವು ಬೀರದು ಎಂದು ಅಮೆರಿಕ ಹೇಳಿದೆ.
ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಸೇನೆಯನ್ನು ನಿಯೋಜಿಸಿರುವುದಕ್ಕೆ ಸಂಬಂಧಿಸಿದ ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಿಂದ ಭಾರತ ದೂರ ಉಳಿದಿತ್ತು. ಈ ಕುರಿತು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ನೆಡ್ಪ್ರೈಸ್, ಮತದಾನದಿಂದ ಭಾರತ ದೂರ ಉಳಿದಿದ್ದರೂ ಭಾರತಕ್ಕೆ ಅಮೆರಿಕದ ಬೆಂಬಲ ಮುಂದುವರಿಯಲಿದೆ ಎಂದರು. ರಶ್ಯಾ-ಉಕ್ರೇನ್ ವಿವಾದದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ನಿಲುವಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಈ ವಿವಾದ ಪರಿಹಾರಕ್ಕೆ ಶಾಂತರೀತಿಯ ಮತ್ತು ರಚನಾತ್ಮಕ ರಾಜತಾಂತ್ರಿಕತೆ ಈಗಿನ ಅಗತ್ಯವಾಗಿದೆ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುವ ರೀತಿಯ ಯಾವುದೇ ಕ್ರಮಗಳನ್ನು ಸಂಬಂಧಿಸಿದವರು ಕೈಗೊಳ್ಳಬಾರದು ಎಂದು ಭಾರತ ಹೇಳಿತ್ತು.
ಉಕ್ರೇನ್ ವಿರುದ್ಧ ರಶ್ಯಾದ ಅಪ್ರಚೋದಿತ ಸಂಭಾವ್ಯ ದಾಳಿ ಮತ್ತು ಉಕ್ರೇನ್ ಗಡಿಭಾಗದಲ್ಲಿ ಸೇನಾ ಜಮಾವಣೆಯ ವಿಷಯದಲ್ಲಿ ಅಮೆರಿಕವು ಭಾರತ ಸಹಿತ ವಿಶ್ವದ ಹಲವು ದೇಶಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಉಕ್ರೇನ್-ರಶ್ಯಾ ವಿವಾದದ ಕುರಿತು ಜನವರಿ 31ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ನಮ್ಮ ದೃಷ್ಟಿಕೋನವನ್ನು ಬಿಂಬಿಸುವ ಹೇಳಿಕೆ ನೀಡಿದ್ದೇವೆ. ಈ ಕುರಿತ ಇನ್ನಷ್ಟು ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ನೆಡ್ಪ್ರೈಸ್ ಪ್ರತಿಕ್ರಿಯಿಸಿದರು.
ಪೂರ್ವ ಯುರೋಪ್ಗೆ 3000 ಸೈನಿಕರನ್ನು ರವಾನಿಸುವ ಮೂಲಕ ಅಮೆರಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ ಎಂದು ರಶ್ಯಾ ಗುರುವಾರ ಆರೋಪಿಸಿದೆ.