ಎಚ್ಐವಿಯ ಅಧಿಕ ಮಾರಣಾಂತಿಕ ತಳಿ ನೆದರ್‌ಲ್ಯಾಂಡ್‌ ನಲ್ಲಿ ಪತ್ತೆ

Update: 2022-02-04 17:47 GMT

ಬ್ರಿಟನ್, ಫೆ.4: ಎಚ್ಐವಿಯ ಅತ್ಯಧಿಕ ಮಾರಣಾಂತಿಕವಾಗಿರುವ ಹೊಸ ತಳಿ ಹಲವಾರು ದಶಕಗಳಿಂದ ನೆದರ್ಲ್ಯಾಂಡಿನಲ್ಲಿ ಸುಪ್ತವಾಗಿದೆ. ಆದರೆ ಆಧುನಿಕ ಚಿಕಿತ್ಸೆಯ ಪರಿಣಾಮಕಾರಿತ್ವದ ಕಾರಣ ಈ ವಿಷಯದ ಬಗ್ಗೆ ಹೆಚ್ಚಿನ ಆತಂಕವಿಲ್ಲ ಎಂದು ಆಕ್ಸ್ಫರ್ಡ್ ಸಂಶೋಧಕರು ಗುರುವಾರ ಘೋಷಿಸಿದ್ದಾರೆ.

ವಿಬಿ ರೂಪಾಂತರಿ ಎಂದು ಕರೆಯಲಾಗುವ ಹೊಸ ತಳಿಯ ಸೋಂಕಿಗೆ ಒಳಗಾದವರ ರಕ್ತದಲ್ಲಿ , ಇತರ ತಳಿಗಿಂತ 3.5ರಿಂದ 5.5ರಷ್ಟು ಅಧಿಕ ಮಟ್ಟದ ವೈರಸ್ ಪತ್ತೆಯಾಗಿದೆ ಮತ್ತು ಇವರಲ್ಲಿ ರೋಗ ನಿರೋಧಕ ಶಕ್ತಿ ತ್ವರಿತವಾಗಿ ಕ್ಷೀಣಿಸುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಚಿಕಿತ್ಸೆ ಆರಂಭಿಸದ ಬಳಿಕ ಇವರಲ್ಲಿ ಇತರ ಎಚ್ಐವಿ ತಳಿಯ ಸೋಂಕಿಗೆ ಒಳದಾದವರ ರೀತಿಯಲ್ಲೇ ರೋಗ ನಿರೋಧಕ ಶಕ್ತಿ ಚೇತರಿಸಿಕೊಂಡಿದೆ ಎಂದು ಗುರುವಾರ ‘ಸೈಯನ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೇಳಿದೆ. 

1980 ಮತ್ತು 90ರ ದಶಕದ ಆರಂಭದಲ್ಲಿ ಈ ತಳಿ ನೆದರ್ ಲ್ಯಾಂಡಿನಲ್ಲಿ ಉಲ್ಬಣಿಸಿರುವ ಸಾಧ್ಯತೆಯಿದೆ. ಆದರೆ ಸುಮಾರು 2010ರ ಅವಧಿಯಲ್ಲಿ ಕ್ಷೀಣಿಸತೊಡಗಿದೆ. ಈ ಹೊಸ ತಳಿಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆಕ್ಸ್‌ಫರ್ಡ್‌ ನ ಸೋಂಕುರೋಗ ಶಾಸ್ತ್ರಜ್ಞ ಕ್ರಿಸ್ ವೇಮಂಟ್ ಹೇಳಿದ್ದಾರೆ. ಆಧುನಿಕ ಚಿಕಿತ್ಸಾ ವ್ಯವಸ್ಥೆ ಈ ತಳಿಯ ವಿರುದ್ಧವೂ ಪರಿಣಾಮಕಾರಿಯಾಗಿದ್ದು ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ಅತ್ಯಗತ್ಯವಾಗಿದೆ ಎಂದವರು ಹೇಳಿದ್ದಾರೆ.
   
ಎಚ್ಐವಿ ಸೋಂಕಿಗೆ ಒಳಗಾಗುವ ಅಪಾಯದಲ್ಲಿರುವವರು ನಿಯಮಿತ ಪರೀಕ್ಷೆಯ ಮೂಲಕ ಪ್ರಾಥಮಿಕ ಹಂತದಲ್ಲೇ ರೋಗ ನಿರ್ಣಯ ಮತ್ತು ತಕ್ಷಣದ ಚಿಕಿತ್ಸೆ ಪಡೆಯಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಮಹತ್ವವನ್ನು ನಮ್ಮ ಅಧ್ಯಯನ ದೃಢಪಡಿಸಿದೆ ಎಂದು ಆಕ್ಸ್‌ಫರ್ಡ್‌ ನ ಮತ್ತೊಬ್ಬ ಸಂಶೋಧಕ ಕ್ರಿಸ್ಟೋಫರ್ ಫ್ರೇಸರ್ ಹೇಳಿದ್ದಾರೆ. ವೈರಸ್‌ಗಳು ಹೆಚ್ಚು ವಿಶಕಾರಿಯಾಗಿ ವಿಕಸನಗೊಳ್ಳುತ್ತವೆ ಎಂಬ ಸಿದ್ಧಾಂತಕ್ಕೆ ಈ ನಿರ್ದಶನ ಪೂರಕವಾಗಿದೆ. ಇದಕ್ಕೆ ಮತ್ತೊಂದು ನಿದರ್ಶನವೆಂದರೆ ಕೋವಿಡ್ ಸೋಂಕು ಮತ್ತು ಡೆಲ್ಟಾ ರೂಪಾಂತರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News