ಅಫ್ಗಾನಿಸ್ತಾನ: ಕಲ್ಲಿದ್ದಲು ಗಣಿ ದುರಂತದಲ್ಲಿ ಕನಿಷ್ಟ 10 ಮಂದಿ ಮೃತ್ಯು

Update: 2022-02-04 18:03 GMT

ಕಾಬೂಲ್, ಫೆ.4: ಅಫ್ಗಾನ್ ನ ಉತ್ತರದ ಬಾಘ್ಲಾನ್ ಪ್ರಾಂತದಲ್ಲಿ ಕಲ್ಲಿದ್ದಲ ಗಣಿಯೊಂದು ಕುಸಿದು ಅದರೊಳಗೆ ಸಿಲುಕಿ ಕನಿಷ್ಟ 10 ಕಾರ್ಮಿಕರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಗಣಿ ಕುಸಿದು ಬಿದ್ದಾಗ ಅದರೊಳಗೆ 13 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಕ್ಷಣ ಪರಿಹಾರ ಮತ್ತು ರಕ್ಷಣೆಯ ತಂಡ ಸ್ಥಳಕ್ಕೆ ಧಾವಿಸಿದ್ದು 3 ಕಾರ್ಮಿಕರನ್ನು ರಕ್ಷಿಸಲು ಮಾತ್ರ ಸಾಧ್ಯವಾಗಿದೆ ಎಂದು ಪ್ರಾಂತೀಯ ಮಾಹಿತಿ ನಿರ್ದೇಶಕ ಅಸಾದುಲ್ಲಾ ಹಶೆಮಿ ಹೇಳಿದ್ದಾರೆ. ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಪಡೆ ನಿಯಂತ್ರಣ ಸಾಧಿಸಿದ ಬಳಿಕ ದೇಶದಲ್ಲಿರುವ ಅನುಭವಿ ಗಣಿ ಕಾರ್ಮಿಕರು ದೇಶ ತೊರೆದಿದ್ದು ಈಗ ಅನನುಭವಿ ಕಾರ್ಮಿಕರಿಂದ ಕಾರ್ಯನಿರ್ವಹಿಸಬೇಕಿದೆ. ಆದ್ದರಿಂದ ದುರಂತಗಳ ಪ್ರಮಾಣವೂ ಹೆಚ್ಚಿದೆ ಎಂದು ಬುಡಕಟ್ಟು ಮುಖಂಡರು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಕಲ್ಲಿದ್ದಲ ಜತೆಗೆ, ಕಬ್ಬಿಣ, ಅಮೃತಶಿಲೆಯ ಸಂಪನ್ಮೂಲ ಹೇರಳವಾಗಿವೆ. ಆದರೆ ಇವುಗಳ ಗಣಿಗಾರಿಕೆ ಸಂದರ್ಭ ಸೂಕ್ತ ಮುನ್ನೆಚ್ಚರಿಕೆ ಮತ್ತು ಸುರಕ್ಷಿತಾ ಕ್ರಮಗಳನ್ನು ಪಾಲಿಸದ ಕಾರಣ ಹಲವು ದುರಂತಗಳು ಸಂಭವಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News